ಆಯುರ್ವೇದ ವೈದ್ಯರು ಪರಿಸರ ವಿಜ್ಞಾನಿಗಳಿದ್ದಂತೆ
ಸಂಜೆವಾಣಿ ನ್ಯೂಸ್
ಮೈಸೂರು.ಜೂ.06:- ಆಯುರ್ವೇದ ವೈದ್ಯರು ಒಂದು ರೀತಿಯಲ್ಲಿ ಪರಿಸರ ವಿಜ್ಞಾನಿಗಳಿದ್ದಂತೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಸತ್ಯನಾರಾಯಣ ಭಟ್ ಬಣ್ಣಿಸಿದರು.
ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಬುಧವಾರ ಸರಸ್ವತಿಪುರಂನ ಚಂದ್ರವನದಲ್ಲಿ ಏರ್ಪಡಿಸಿದ್ದ ಪರಿಸರ ದಿನಾಚರಣೆಯಲ್ಲಿ ಗೌರವ ಅತಿಥಿಯಾಗಿ ಮಾತನಾಡಿದ ಅವರು, ಪರಿಸರದಲ್ಲಿ ದೊರೆಯುವ ಗಿಡಮೂಲಿಕೆಗಳಿಂದ ತಯಾರಾದ ಔಷಧಿ ನೀಡುವುದು ಇದಕ್ಕೆ ಕಾರಣ. ಹೀಗಾಗಿ ಪರಿಸರದಲ್ಲಿರುವ ಸಸ್ಯಗಳ ಬಗ್ಗೆ ನಮಗೆ ಅರಿವಿರಬೇಕು. ಅವುಗಳನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಇರುವೆ, ಕೀಟ ಎಲ್ಲಾ ಸೇರಿ ವಿಶ್ವವಾಗಿದೆ. ನೀರಿದ್ರೆ ನಾವು- ನೀವು, ಇಲ್ಲದಿದ್ದರೆ ಇಲ್ಲ. ಭೂಮಿಯ ಅನುಭವ ನಮಗೆ ಸಿಗಬೇಕಾದರೆ ಬರಿಗಾಲಲ್ಲಿ ನಡೆಯಬೇಕು. ಪರಿಸರವನ್ನು ಆನಂದಿಸುವುದನ್ನು ಕಲಿಯಬೇಕು. ಪರಿಸರದೊಂದಿಗೆ ಬೆರೆತು ಅದರೊಳಗೆ ನಾವಾದಾಗ ಪರಿಸರ ಉಳಿಯುತ್ತದೆ ಎಂದು ಸಲಹೆ ಮಾಡಿದರು.
ದಕ್ಕನ್ ಪ್ರಸ್ತಭೂಮಿ ಪ್ರಸ್ತುತ ಅಪಾಯದಲ್ಲಿದೆ. ಅರಣ್ಯ ನಾಶವಾಗುತ್ತಿರುವುದು ಇದಕ್ಕೆ ಕಾರಣ. ಹಸಿರಿದ್ದರೆ ಉಸಿರು. ಹೀಗಾಗಿ ಎಲ್ಲರೂ ಪರಿಸರ ಸಂರಕ್ಷಿಸುವ ಪಣ ತೊಡಬೇಕು. ಹಸಿರು ನಾಶವಾಗಲು ಬಿಡದೆ, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಬೇಕು ಎಂದು ಅವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎಸ್. ರಾಧಕೃಷ್ಣ ರಾಮರಾವ್ ಮಾತನಾಡಿ, ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ ವಿವಿಧ ಗಿಡಮೂಲಿಕೆಗಳ 2,500 ಸಸಿಗಳನ್ನು ವಿತರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಪರಿಸರ ಸಮತೋಲನ ಕಾಪಾಡದಿದ್ದರೆ ಜಾಗತಿಕ ತಾಪಮಾನ ಉಂಟಾಗುತ್ತದೆ. ಇದು ಮಳೆ- ಬೆಳೆ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ಸಾರ್ವಜನಿಕರು ಇತ್ತ ಹೆಚ್ಚು ಗಮನಹರಿಸಬೇಕು ಎಂದರು.
ರಾಜ್ಯದಲ್ಲಿ ಪರಿಸರ ಸಂರಕ್ಷಣೆಯ ವಿಷಯದಲ್ಲಿ ಸಾಲುಮರದ ತಿಮ್ಮಕ್ಕ, ಸುಕ್ರಿ ಬೊಮ್ಮನಗೌಡ, ತುಳಸೀಗೌಡ, ಕೆರೆ ಕಾಮೇಗೌಡ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅದೇ ರೀತಿ ಮೈಸೂರಿನ ಕೆ.ಆರ್.ಗುರಿಕಾರ್, ಚಾಮರಾಜನಗರದ ವೆಂಕಟೇಶ್, ಮಂಡ್ಯದ ರಮೇಶ್ ಕೂಡ ತಮ್ಮ ತಮ್ಮ ಇತಿಮಿತಿಯಲ್ಲಿ ಅತ್ಯುತ್ತಮವಾಗಿ ಪರಿಸರ ಸಂರಕ್ಷಣೆಯ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ರೀತಿಯ ಜನ ನಮಗೆ ಮಾದರಿಯಾಗಬೇಕು ಎಂದರು.
ಕಾಲೇಜಿನ ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ್ ಯಾದವ್ ವೇದಿಕೆಯಲ್ಲಿದ್ದರು. ರಂಜಿತಾ ಪ್ರಾರ್ಥಿಸಿದರು. ಪೂಜಾಶ್ರೀ ಸ್ವಾಗತಿಸಿದರು. ಡಾ.ಶ್ರೀವತ್ಸ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ.ವೀಣಾ ನಾಯ್ಕ್, ಡಾ.ಪ್ರವೀಣ್, ಡಾ.ವೆಂಕಟಕೃಷ್ಣ ಮೊದಲಾದವರು ಇದ್ದರು. ಸಿಂಚನಾ ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ವಂದಿಸಿದರು.