ಮತದಾರರ ಋಣ ತೀರಿಸಲು ಕೆಲಸ ಮಾಡುತ್ತೇನೆ
ಸಂಜೆವಾಣಿ ನ್ಯೂಸ್
ಮೈಸೂರು.ಜೂ.06:- ಮೈಸೂರು-ಚಾಮರಾಜನಗರ ಲೋಕಸಭಾ ಕ್ಷೇತ್ರದ ಗೆಲುವು ಸಾಧಿಸಿದ ನೂತನ ಸಂಸದ ಸುನೀಲ್ ಬೋಸ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಸುನೀಲ್ ಬೋಸ್ ಅವರಿಗೆ ಹೂವಿನ ಹಾರಗಳನ್ನು ಹಾಕಿ ಜೈಕಾರ ಕೂಗಿ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ನೇತೃತ್ವದಲ್ಲಿ ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿದ ಬಳಿಕ ನೂತನ ಸಂಸದ ಸುನೀಲ್ ಬೋಸ್ ಮಾತನಾಡಿ, ಬಹುಶಃ ಸಾಮಾಜಿಕ ಜಾಲತಾಣದಲ್ಲಿ ನನಗೆ ಮಾಡಿದಷ್ಟು ಅಪಪ್ರಚಾರ ಯಾರಿಗೂ ಮಾಡಲಿಲ್ಲ. ಆದರೂ ಜನರು ನನ್ನನ್ನು ಗೆಲ್ಲಿಸಿದ್ದು, ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದರು.
ನನ್ನ ಅಭ್ಯರ್ಥಿ ಎಂದು ಘೋಷಿಸಿದಾಗ ಅನೇಕರು ಗೆಲ್ಲುವ ಕ್ಷೇತ್ರ ಕಳೆದುಕೊಂಡೆವು. ಅಯ್ಯೋ ಡಾ.ಎಚ್.ಸಿ.ಮಹದೇವಪ್ಪ ಅವರ ಮಗ ಗೆಲ್ಲಲ್ಲವೆಂದರು. ಆದರೆ, ಗೆಲ್ಲುತ್ತೇನೆ ಎನ್ನುವ ಆಶಾಭಾವನೆ ನನ್ನಲ್ಲಿತ್ತು. ಏಕೆಂದರೆ ನನ್ನ ಕಾರ್ಯಕರ್ತರು ಅವರ ಮನೆಯಲ್ಲಿ ಒಬ್ಬ ಚುನಾವಣೆಗೆ ನಿಂತಿರುವ ರೀತಿ ಕೆಲಸ ಮಾಡಿದ್ದಾರೆ. ಅದರಲ್ಲೂ ಮೈಸೂರು ಭಾಗಕ್ಕೆ ಮಹದೇವಪ್ಪ ಅವರ ಮಗನಾಗಿ ಪರಿಚಯನಿದ್ದೆ, ಚಾಮರಾಜನಗರ ಭಾಗದಲ್ಲಿ ಅಷ್ಟಾಗಿ ಪರಿಚಯ ಇಲ್ಲದಿದ್ದರೂ. ಆ ಭಾಗದ ಜನತೆ ಗ್ಯಾರಂಟಿ ಯೋಜನೆಗೆ ಮತ ನೀಡಿದ್ದಾರೆ ಎಂದು ಸ್ಮರಿಸಿಕೊಂಡರು.
ವಾಸ್ತವದಲ್ಲಿ ನನಗೆ ಟಿಕೆಟ್ ಸಿಗಲು ಡಾ.ಯತೀಂದ್ರ ಸಿದ್ದರಾಮಯ್ಯ ಕಾರಣರಾಗಿದ್ದು, ಅವರ ಋಣ ಎಂದೆಂದಿಗೂ ಮರೆಯಲ್ಲ. ಅನೇಕರು ಸುನೀಲ್ ಬೋಸ್ ಸೋಲು ಗ್ಯಾರಂಟಿ, ಅವರ ತಂದೆಗೆ ಟಿಕೇಟ್ ಕೊಡಿ ಎಂದು ಸಿದ್ದರಾಮಯ್ಯರ ಬಳಿ ಹೇಳಿದಾಗಲೂ ಯತೀಂದ್ರ ಅವರು ಟಿಕೆಟ್ ಕೊಡಿಸಿದರು ಎಂದರು.
ಯತೀಂದ್ರನಲ್ಲಿ ರಾಕೇಶ್: ಅನೇಕ ಸಂದರ್ಭಗಳಲ್ಲಿ ಯತೀಂದ್ರ ಅವರಿಗೆ ನೇರವಾಗಿ ಹೇಳಿದ್ದೆ. ನೀವೆಲ್ಲರೂ ಶಾಸಕರಾದಿರಿ ನಾನು ಇಷ್ಟು ದುಡಿದರೂ ಅವಕಾಶವಿಲ್ಲವೆಂದು ಅಸಮಾಧಾನ ಹೊರ ಹಾಕಿದ್ದೆ. ಕಾರ್ಯಕರ್ತರು, ಜಿಲ್ಲಾಧ್ಯಕ್ಷರುಗಳೇ ನಿನಗೆ ಅನ್ಯಾಯ ಆಗುತ್ತಿದೆ. ಚಿಕ್ಕವರೆಲ್ಲಾ ಶಾಸಕರಾದರೆನ್ನುತ್ತಿದ್ದರು. ರಾಜಕಾರಣದಲ್ಲಿ ತಾಳ್ಮೆ ಅತಿ ಮುಖ್ಯ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಬಾರಿ ಸಚಿವನ ಪುತ್ರನೆಂಬ ಕಾರಣಕ್ಕೆ ಜನತೆ ಹಾಗೂ ಶಾಸಕರು, ಮಾಜಿ ಎಂಎಲ್‍ಎಗಳು ತಮ್ಮದೇ ಚುನಾವಣೆ ಎಂಬಂತೆ ಕೆಲಸ ಮಾಡಿದ್ದರ ಫಲವಾಗಿ ಗೆದ್ದಿದ್ದೇನೆ. ಇಷ್ಟೊಂದು ಅಂತರದಲ್ಲಿ ಮತ ಕೊಟ್ಟು ಜನತೆ ದೊಡ್ಡ ಜವಾಬ್ದಾರಿ ನೀಡಿದ್ದು, ಅದನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಒಂದು ಸ್ಥಾನದಿಂದ ಒಂಭತ್ತು ಸ್ಥಾನಕ್ಕೆ ಕಾಂಗ್ರೆಸ್ ಹೋಗಿದ್ದು, ಕಳೆದ ಬಾರಿಗಿಂತಲೂ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳಿಸಿದೆ. ಬಿಜೆಪಿ ಜೆಡಿಎಸ್‍ಗೆ ಕಡಿಮೆಯಿದ್ದು, ಜನ ನಮ್ಮಪರವಾಗಿದ್ದಾರೆ. ಹೀಗಾಗಿ ಕಾರ್ಯಕರ್ತರು ದೃತಿಗೆಡಬೇಕಿಲ್ಲ ಎಂದರು.
ಕಾರ್ಯಕರ್ತರ ಶ್ರಮದಿಂದ ಗೆಲವು 9 ಸ್ಥಾನ ಬಂದರೂ ತೃಪ್ತಿ ತಂದಿದೆ. ನಮ್ಮ ನಿರೀಕ್ಷೆ ಬಂದಿಲ್ಲ. ಆದರೆ, ದೊಡ್ಡ ಸಾಧನೆ ದೇಶದಲ್ಲಿ ಆಗಿದೆ. ಬಿಜೆಪಿ ಸರ್ವಾಧಿಕಾರಿ ಧೋರಣೆಯನ್ನು ತಂದಿತ್ತು. ಹತ್ತು ವರ್ಷದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ಹಿಡಿದಿಟ್ಟುಕೊಂಡು ಅವರೆಲ್ಲರನ್ನೂ ಒಂದೇ ಪಕ್ಷದ ಪರವಾಗಿ ಇರುವಂತೆ ಮಾಡಿದ್ದರು. ಹಣ ಬಲದ ಮೂಲಕ ಚುನಾವಣೆ ಎದುರಿಸಲು ಪ್ರಯತ್ನಿಸಿದ್ದರು. ಪ್ರಜಾಪ್ರಭುತ್ವ ಬುಡಮೇಲು ಮಾಡುವ ಬಿಜೆಪ. ಪ್ರಯತ್ನಕ ಹಣ ಹಿನ್ನಡೆಯಾಗಿದೆ. ಅವರ ವಿರುದ್ಧ ಕಾಂಗ್ರೆಸ್ ಗೆಲುವು ಸಾಧ್ಯವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಧರ್ಮಸೇನಾ, ಮುಡಾ ಅಧ್ಯಕ್ಷ ಕೆ.ಮರಿಗೌಡ, ಪ್ರಧಾನ ಕಾರ್ಯದರ್ಶಿ ಈಶ್ವರಚಕ್ಕಡಿ, ಕೆಪಿಸಿಸಿ ಕಾರ್ಯದರ್ಶಿ ಶ್ರೀಪಾಲ್, ಮೈಸೂರು ಬಸವಣ್ಣ ಇನ್ನಿತರರು ಉಪಸ್ಥಿತರಿದ್ದರು.