ಕಲ್ಯಾಣ ನಾಡಲ್ಲಿ ಕಾಂಗ್ರೆಸ್ ಜಯಭೇರಿ:ಡಾ. ಅಜಯ್ ಸಿಂಗ್ ಸಂತಸ
ಕಲಬುರಗಿ.ಜೂ.5:ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿನ ಕಾಂಗ್ರೆಸ್ ಪಕ್ಷದ ಹುರಿಯಾಳಾಗಿದ್ದ ರಾಧಾಕೃಷ್ಣ ದೊಡ್ಮನಿಯವರ ಗೆಲುವಿಗೆ ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಜನತೆ, ಅದರಲ್ಲೂ ಗ್ರಾಮೀಣ ಜನತೆ ರಾಜ್ಯದಲ್ಲಿನ ಕಾಂಗ್ರೆಸ್ ಪಂಚ ಗ್ಯಾರಂಟಿಗಳಿಗೆ ಮನಸೋತು ಮತ ಹಾಕಿದ್ದಾರೆ. ಇದಲ್ಲದೆ ಎಐಸಿಸಿ ಅಧ್ಯಕ್ಷರು ಲೋಕಸಭೆಯಲ್ಲಿ ಘೋಷಿಸಿರುವ ಅನೇಕ ಗ್ಯಾರಂಟಿ ಯೋಜನೆಗಳಿಗೂ ಗಮನ ಕಟ್ಟು ಜನ ಮತ ಹಾಕಿದ್ದಾರೆ ಎಂದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿ ಗೆಲುವು ಸಾಧಿಸುವ ನಿರೀಕ್ಷೆ ಇತ್ತು. ಆದಾಗ್ಯೂ ಬಿಜೆಪಿ- ಜೆಡಿಎಸ್ ಮೈತ್ರಿ ದಕ್ಷಿಣದಲ್ಲಿ ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗಿರಬಹುದು. ಆದರೆ ನಾವು ಕಲ್ಯಾಣ ನಾಡಲ್ಲಿರುವ ಎಲ್ಲಾ 5 ಸ್ಥಾನ ಗೆದ್ದು ಬೀಗಿದ್ದೇವೆ. ಎಐಸಿಸಿ ಅದ್ಯಕ್ಷರ ತವರು ನಾಡು ಈ ಭಾಗದಲ್ಲಿ ಕಾಂಗ್ರೆಸ್ ಮತ್ತೆ ಎಂದಿನಂತೆ ಕಳೆಗಟ್ಟಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಕಲ್ಯಾಣಕ್ಕೆ ನೀಡಿರುವ ಕಲಂ 371 ಜೆ ಕೊಡುಗೆ ಫಲ ಕೊಟ್ಟಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ದೇಶದಲ್ಲೇ ಇಂಡಿಯಾ ಒಕ್ಕೂಟಕ್ಕೆ ಜನ ಬೆಂಬಲಿಸಿದ್ದಾರೆ. ನಾವು 295 ಸ್ಥಾನ ಬರುತ್ತದೆ ಎಂದು ನಿರೀಕ್ಷೆಯಲ್ಲಿ ಹೇಳಿಕೆ ನೀಡಿದ್ದೇವು. ಜನತೆಯೂ ನಮಗೆ ಅದೇ ದಿಶೆಯಲ್ಲಿ ಹರಸಿದ್ದಾರೆ. ಜನ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಒಕ್ಕೂಟದ ಪರ ಇದ್ದಾರೆ. ನಮ್ಮ ಧೋರಣೆಗಳನ್ನು ಮೆಚ್ಚಿಕೊಂಡಿದ್ದಾರ ಎಂಬುದು ಈ ಚುನಾವಣೆಯಿಂದ ಸಾಬೀತಾಗಿದೆ.
ದೇಶದ ಜನ ಮಂದಿರ- ಮಸೀದಿಯಂತಹ ವಿವಾದಗಳಿಗೆ ಎಡೆಮಾಡಿಕೊಡದೆ, ದಿನದ ಬದುಕಿಗೆ ಮೂಲ ಸವಲತ್ತು ಕೊಟ್ಟು ಹಸನು ಮಾಡುವ ಧೋರಣೆಗಳಿರುವ ಕಾಂಗ್ರೆಸ್ ಮೆಚ್ಚಿದ್ದಾರೆ ಎಂಬುದಕ್ಕೆ ಇದೇ ಚುನಾವಣೆ ಸಾಕ್ಷಿ.ಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಕಲಬುರಗಿ ಸೇರಿದಂತೆ ಈ ಭಾಗದ ಪ್ರಗತಿಗೆ ಬದ್ಧವಾಗಿರಲಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.