ಮತದಾರರಿಗೆ ಧನ್ಯವಾದ ಸಲ್ಲಿಸಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್
ಬೀದರ್ ಜೂ.05: ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ (ಜೆಡಿಎಸ್, ಬಿಜೆಪಿ) ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದ ಮತದಾರರಿಗೆ, ಜೆಡಿಎಸ್, ಬಿಜೆಪಿ ಮುಖಂಡರಿಗೆ, ಕಾರ್ಯಕರ್ತರಿಗೆ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಮಂಗಳವಾರ ಸಂದೇಶ ರವಾನಿಸಿದ ಅವರು, ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ (ಜೆಡಿಎಸ್, ಬಿಜೆಪಿ) ಅಭ್ಯರ್ಥಿಗಳ ಪರವಾಗಿ ಅತ್ಯುತ್ತಮ ಬಹುಮತ ನೀಡಿದ ರಾಜ್ಯದ ಜನತೆಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ನಾವು ನಿರೀಕ್ಷೆ ಮಾಡಿದ ಮಟ್ಟಿನಲ್ಲಿ ನಮಗೆ ಫಲಿತಾಂಶ ಸಿಕ್ಕಿಲ್ಲವಾದರು, ಹೆಚ್ಚಿನ ಸ್ಥಾನಗಳು ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳಿಗೆ ಲಭಿಸಿವೆ. ರಾಜ್ಯದ ಮತದಾರರು ನೀಡಿದ ತೀರ್ಪನ್ನು ಸ್ವಾಗತಿಸುತ್ತೇನೆ.
ನಮ್ಮ ಬೀದರ್ ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್, ಬಿಜೆಪಿ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ ಎರಡು ಪಕ್ಷಗಳ ಮುಖಂಡರಿಗೆ, ಕಾರ್ಯಕರ್ತರಿಗೆ ಮತ್ತು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಎನ್‍ಡಿಎ ಗೆಲುವಿಗೆ ಶ್ರಮಿಸಿದ ಸರ್ವರಿಗೂ ಈ ಮೂಲಕ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಧನ್ಯವಾದಗಳು’ ಎಂದು ಬರೆದಿರುವ ಸಂದೇಶವನ್ನು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಹಂಚಿಕೊಂಡಿದ್ದಾರೆ.