ಈಶಾನ್ಯ ಪದವೀಧರ ಚುನಾವಣೆ, ಭಾಲ್ಕಿಯಲ್ಲಿ 74 ಪ್ರತಿಶತ ಮತದಾನ
ಭಾಲ್ಕಿ: ಜೂ.5:ತಾಲೂಕಿನ ನಾಲ್ಕು ಮತಗಟ್ಟೆಗಳಲ್ಲಿ ಸೋಮವಾರ ನಡೆದ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪ್ರತಿಶತ 74% ಮತದಾನವಾಗಿದೆ. ಬೆಳಿಗ್ಗೆ ಹೊತ್ತಿನಲ್ಲಿ ಮಳೆಯಿದ್ದದ್ದರಿಂದ ಮತದಾನ ನಿಧಾನಗತಿಯಲ್ಲಿ ಸಾಗಿತ್ತು. ನಂತರ ಪದವಿಧರ ಮತದಾರರು, ಮತ ಚಲಾಯಿಸಲು ತಂಡೋಪತಂಡವಾಗಿ ಆಗಮಿಸಿ, ಸರತಿಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ಕಂಡು ಬಂತು.
ಪಟ್ಟಣದ ತಹಸೀಲ ಕಚೇರಿಯಲ್ಲಿರುವ ಮತಗಟ್ಟೆಯಲ್ಲಿ 1235 ಮತದಾರರು, ಭಾತಂಬ್ರಾ ಗ್ರಾಮದ ಮತಗಟ್ಟೆಯಲ್ಲಿ ಒಟ್ಟು 634 ಮತದಾರರು, ಹಲಬರ್ಗಾ ಗ್ರಾಮದ ಮತಗಟ್ಟೆಯಲ್ಲಿ 623 ಮತದಾರರು, ಖಟಕಚಿಂಚೋಳಿ ಗ್ರಾಮದ ಮತಗಟ್ಟೆಯಲ್ಲಿ 391 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.
ಒಟ್ಟು ತಾಲೂಕಿನ ನಾಲ್ಕು ಮತಗಟ್ಟೆಗಳಲ್ಲಿ ನೊಂದಾಯಿತ ಒಟ್ಟು 3889 ಮತದಾರರಲ್ಲಿ 2883 ಮತದಾರರು ಮತಚಲಾಯಿಸಿದ್ದು, ಪ್ರತಿಶತ 74% ಮತದಾನವಾಗಿದೆ ಎಂದು ಉಪ ತಹಸೀಲ್ದಾರ ಗೋಪಾಲ ಹಿಪ್ಪರಗಿ ಮಾಹಿತಿ ನೀಡಿದ್ದಾರೆ.