ಮಳೆಗೆ ಕೊಚ್ಚಿಹೋದ ರಸ್ತೆ, ಸೇತುವೆಗಳು
ಲಕ್ಷ್ಮೇಶ್ವರ,ಜೂ.5: ತಾಲ್ಲೂಕಿನಾದ್ಯಂತ ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾನದ ವರೆಗೂ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ತಾಲೂಕಿನಲ್ಲಿ ಅನೇಕ ರಸ್ತೆಗಳು ಸಂಚಾರಕ್ಕೆ ಸಂಚಾರ ಉಂಟಾಗಿ ಕೆಲವು ಕಡೆ ಹಳ್ಳಗಳು ತುಂಬಿ ಹರಿದಿದ್ದರಿಂದ ರಸ್ತೆ ಸೇತುವೆಗಳು ಕೊಚ್ಚಿಕೊಂಡು ಹೋಗಿವೆ.
ಕಳೆದ ಎರಡು ವರ್ಷಗಳ ಹಿಂದೆ ವಿಪರೀತವಾದ ಮಳೆಯಿಂದಾಗಿ ಪುಟ್ಟಗಾವ್ ಬಡ್ನಿ ಮತ್ತು ಆದ್ರಳ್ಳಿ ಮಧ್ಯದ ಸೇತುವೆ ಹಚ್ಚಿಕೊಂಡು ಹೋಗಿ ರಸ್ತೆಗೆ ಸಂಚಕಾರ ಬಂದಿತ್ತು ಈಗ ಸೋಮವಾರ ಮತ್ತು ಮಂಗಳವಾರ ಸುರಿದ ಮಳೆಗೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆ ಮತ್ತು ಸೇತುವೆ ಕೊಚ್ಚಿಕೊಂಡು ಹೋಗಿ ಎರಡು ಗ್ರಾಮಗಳ ಮಧ್ಯ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಅವರು ಬಡ್ನಿ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಈ ಸಂದರ್ಭದಲ್ಲಿ ಗ್ರಾಮಸ್ಥರು ಅಧಿಕಾರಿಗಳಿಗೆ ಲೋಕೋಪಯೋಗಿ ಇಲಾಖೆಯವರು ಹಾನಿಗೀಡಾದಲ್ಲಿ ತಾತ್ಕಾಲಿಕ ಕೆಲಸ ಮಾಡಿ ಕೈ ತೊಳೆದುಕೊಳ್ಳುತ್ತಿರುವುದರಿಂದ ಪದೇ ಪದೇ ಈ ಸೇತುವೆ ಕೊಚ್ಚಿಕೊಂಡು ಹೋಗುತ್ತಿದೆ ಎಂದರು.
ತಾಲೂಕಿನಲ್ಲಿ ಮಾಡಳ್ಳಿ ಬಾಗವಾಡ ಮಧ್ಯದ ಸೇತುವೆ ಲಕ್ಷ್ಮೇಶ್ವರ ಗೊಜನೂರು ಮಧ್ಯದ ಸೇತುವೆ ಎರಡು ದಿನಗಳಿಂದ ತುಂಬಿ ಹರಿಯುತ್ತಿವೆ. ಗೋಜನೂರಿನ ಹಳ್ಳದಿಂದ ಅಕ್ಕಿಗುಂದ ಬಟ್ಟೂರು ಮುಖಾಂತರ ಹರಿಯುವ ಈ ಹಳ್ಳಕ್ಕೆ 18 ಬಾಂಧಾರಗಳನ್ನು ನಿರ್ಮಿಸಿದ್ದು ಎಲ್ಲ ಬಾಂಧರಗಳು ಹೂಳು ತುಂಬಿ ತುಳುಕುತ್ತಿದ್ದವು ಜೊತೆಗೆ ಭಾರಿ ಪ್ರಮಾಣದ ಆಪು ಬೆಳೆದಿದ್ದು ನೀರು ಹರಿಯಲು ಅಡ್ಡ ಉಂಟಾಗಿ ಪದೇಪದೇ ಹಾನಿ ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ದೂರುತ್ತಾರೆ.
ಈ ಕುರಿತು ಬಡ್ನಿ ಗ್ರಾಮ ಪಂಚಾಯತಿಯ ಸದಸ್ಯ ಸತೀಶ್ ಗೌಡ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿ ಎರಡು ವರ್ಷಗಳ ಹಿಂದೆಯೇ ನೀರಿನ ಪ್ರವಾಹಕ್ಕೆ ಸೇತುವೆ ಕೊಚ್ಚಿಕೊಂಡು ಹೋಗಿ ಅಭದ್ರವಾಗಿದ್ದರೂ ಅದನ್ನು ಸೂಕ್ತವಾಗಿ ದುರಸ್ತಿ ಮಾಡದ್ದರಿಂದ ಮತ್ತೆ ಈ ರೀತಿ ಉಂಟಾಗಿದೆ ಎಂದರು.
ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಅವರು ಮಾಹಿತಿ ನೀಡಿ ಕಳೆದ ಎರಡು ದಿನಗಳಿಂದ ರಸ್ತೆ ಹಾನಿ ಮತ್ತು ವಿದ್ಯುತ್ ಕಂಬಗಳು ಬಿದ್ದಿದ್ದು ಹೆಸ್ಕಾಂನವರು ತ್ವರಿತಗತಿಯಲ್ಲಿ ಕಾರ್ಯಪ್ರವಕ್ತರಾಗಿದ್ದಾರೆ ಎಂದು ಹೇಳಿದರು.