ಲೋಕೋಪಯೋಗಿ ಇಲಾಖೆ ತಪ್ಪಿಗೆ ಅಮಾಯಕ ಬಲಿ
ಕಲಬುರಗಿ,ಸೆ.24-ಡ್ರೈನೇಜ್ ನಿರ್ಮಿಸಲೆಂದು ಲೋಕೋಪಯೋಗಿ ಇಲಾಖೆ ವತಿಯಿಂದ ತೋಡಲಾಗಿದ್ದ ತಗ್ಗಿನಲ್ಲಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಗರದ ಹಳೆ ಜೇವರ್ಗಿ ರಸ್ತೆಯ ಜೀವನ ಪ್ರಕಾಶ್ ಶಾಲೆ ಹತ್ತಿರ ನಡೆದಿದೆ.
36 ರಿಂದ 38 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ತಗ್ಗಿನಲ್ಲಿ ಬಿದ್ದು ಮೃತಪಟ್ಟಿದ್ದು, ಮೃತನ ಹೆಸರು, ವಿಳಾಸ ಇತ್ಯಾದಿ ವಿವರಗಳಿನ್ನೂ ತಿಳಿದುಬಂದಿಲ್ಲ.
ಡ್ರೈನೇಜ್ ನಿರ್ಮಿಸಲೆಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ನಗರದ ಹಳೆ ಜೇವರ್ಗಿ ರಸ್ತೆಯ ಜೀವನ ಪ್ರಕಾಶ್ ಶಾಲೆ ಹತ್ತಿರ 5 ರಿಂದ 6 ಅಡಿ ತಗ್ಗು ತೋಡಿದೆ. ಆದರೆ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಲು ಬ್ಯಾರಿಕೇಡ್ ಸಹ ಹಾಕಿಲ್ಲ. ನಿನ್ನೆ ರಾತ್ರಿ ಮಳೆ ಬಂದಿದ್ದರಿಂದ ರಸ್ತೆಯಾವುದು, ತಗ್ಗು ಯಾವುದು ಎಂದು ತಿಳಿಯದೇ ವ್ಯಕ್ತಿ ತಗ್ಗಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ. ತಗ್ಗಿನಲ್ಲಿ ಬಿದ್ದು ವ್ಯಕ್ತಿ ಮೃತಪಟ್ಟಿರುವ ವಿಷಯ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಸುದ್ದಿ ತಿಳಿದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಮಹಾನಗರ ಪಾಲಿಕೆ ಮಹಾಪೌರ ಯಲ್ಲಪ್ಪ ನಾಯ್ಕೋಡಿ, ಸ್ಟೇಷನ್ ಬಜಾರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಮಾತನಾಡಿ, ಡ್ರೈನೇಜ್ ನಿರ್ಮಾಣಕ್ಕೆಂದು ಪಿಡಬ್ಲ್ಯೂಡಿ ತೋಡಿದ ತಗ್ಗಿನೊಳಗೆ ಬಿದ್ದು ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತನ ಗುರುತು ಪತ್ತೆಯಾದ ಮೇಲೆ ಪಿಡಬ್ಲ್ಯೂಡಿ ಮತ್ತು ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.