ಸಿಡಿಲು ಬಡಿದು ನಾಲ್ವರ ಸಾವು
ಯಾದಗಿರಿ,ಸೆ 24:ಮಳೆಯಿಂದ ರಕ್ಷಣೆಗಾಗಿ ದೇವಸ್ಥಾನದ ಆಶ್ರಯ ಪಡೆದ ಒಂದೇ ಕುಟುಂಬದ ಮೂವರು ಸೇರಿದಂತೆ, ನಾಲ್ಕು ಮಂದಿ ರೈತರು ಸಿಡಿಲು ಬಡಿದು ಸಾವನ್ನಪ್ಪಿರುವ ಹಾಗೂ ಮೂವರು ಗಾಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಜಿನಕೇರಾ ತಾಂಡಾದಲ್ಲಿ ಸೋಮವಾರ ಸಂಜೆ ನಡೆದಿದೆ.
ಕಿಶನ್ ನಾಮಣ್ಣ ಜಾಧವ (25), ಚನ್ನಪ್ಪ ನಾಮಣ್ಣ ಜಾಧವ (18), ಸುನಿಬಾಯಿ ರಾಠೋಡ (27 ) ಮತ್ತು ನೇನು ನಿಂಗಪ್ಪ ಜಾಧವ (15) ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಜಿನಕೇರಾ ತಾಂಡಾದ ಜಮೀನೊಂದರಲ್ಲಿ ಬೆಳದಿದ್ದ ಉಳ್ಳಾಗಡ್ಡೆ ಕಳೆ ತೆಗೆಯಲು ,ಭತ್ತದ ನಾಟಿ ಮಾಡಲು ಕೂಲಿ ಕೆಲಸಕ್ಕೆಂದು ಹೋಗಿದ್ದ ಮೃತರು, ಏಕಾಏಕಿ ಮಳೆ ಸುರಿದಾಗ ಸಮೀಪದ ಮರಗಮ್ಮ ಗುಡಿಗೆ ಹೋಗಿದ್ದಾರೆ.ಅಷ್ಟರಲ್ಲಿಯೇ ಗುಡಿಗೆ ಅಪ್ಪಳಿಸಿದ ಸಿಡಿಲಿನಿಂದಾಗಿ ನಾಲ್ವರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.ಯಾದಗಿರಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.