ವಿಜಯಪುರದಲ್ಲಿ ಧಾರಾಕಾರ ಮಳೆ: ತಗ್ಗು ಪ್ರದೇಶಗಳಿಗೆ ನೀರು, ಜನಜೀವನ ಅಸ್ತವ್ಯಸ್ತ
ವಿಜಯಪುರ,ಸೆ.24:ಕಳೆದ ರಾತ್ರಿ ಧಾರಾಕಾರ ಸುರಿದ ಮಳೆಯಿಂದಾಗಿ ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ.
ಸೋಮವಾರ ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ಸಂಜೆವರೆಗೆ ಮಳೆ ಸುರಿಯಲಿಲ್ಲ. ಒಂದೆರಡು ಸಲ ಜಿಟಿಜಿಟಿ ಮಳೆ ಬಂತಾದರೂ ಉತ್ತಮ ಮಳೆ ಸುರಿಯಲಿಲ್ಲ. ಆದರೆ ರಾತ್ರಿ 8 ಗಂಟೆ ಸುಮಾರಿಗೆ ಧಾರಾಕಾರವಾಗಿ ರಭಸದ ಮಳೆ ಸುರಿಯಿತು. ರಾತ್ರಿಯಿಡೀ ಧಾರಾಕಾರ ಮಳೆ ಸುರಿಯಿತು. ನೋಡು ನೋಡುತ್ತಿದ್ದಂತೆಯೇ ವಿಜಯಪುರ ರಸ್ತೆಗಳೆಲ್ಲ ನದಿಯಂತಾಗಿ ತುಂಬಿ ಹರಿದವು. ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ತಗ್ಗು ಪ್ರದೇಶದ ಬಡಾವಣೆಗಳಾದ ದಿವಟಗೇರಿ ಗಲ್ಲಿ, ಜಾಮೀಯಾ ಮಸೀದಿ ರಸ್ತೆ, ಬಡಿಕಮಾನ ರಸ್ತೆ, ರಾಮನಗರ, ಇಬ್ರಾಹಿಂರೋಜಾ ಬಡಾವಣೆ, ಜಿಲ್ಲಾಸ್ಪತ್ರೆ ಹಿಂಭಾಗದ ಅತಾಲಟ್ಟಿ ರಸ್ತೆ, ಸ್ಟೇಶನ್ ಬ್ಯಾಕ್ ರೋಡ, ಸೊಲ್ಲಾಪುರ ರಸ್ತೆ, ಕೆ.ಸಿ. ನಗರ, ಆಲಕುಂಟೆ ನಗರ, ಮುಗಳಖೋಡ ಮಠ ಸುತ್ತ ಮುತ್ತಲಿನ ಪ್ರದೇಶ ಸೇರಿದಂತೆ ನಗರದ ಬಹುತೇಕ ತಗ್ಗು ಪ್ರದೇಶದ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದೆ.
ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಜಾಗರಣೆ ಮಾಡಬೇಕಾಯಿತು. ಮನೆಗಳಿಗೆ ನುಗ್ಗಿದ ನೀರನ್ನು ಹೊರ ಹಾಕುವಲ್ಲಿ ತಗ್ಗು ಪ್ರದೇಶದ ಜನರು ಹೈರಾಣ ಆಗಬೇಕಾಯಿತು.
ಇಲ್ಲಿನ ಸ್ಟೇಶನ್ ರಸ್ತೆಯ ಕಾಮತ್ ಹೊಟೇಲ್ ಕೆಳ ಭಾಗದ ಸೂಪರ್ ಬಜಾರ್ ಗೆ ಮಳೆ ನೀರು ನುಗ್ಗಿ ಲಕ್ಷಾಂತ ರೂ.ಗಳ ಮೌಲ್ಯದ ಆಹಾರ ಪದಾರ್ಥಗಳು ಹಾನಿಯಾಗಿವೆ. ಅಲ್ಲದೆ ಕೆಲ ಕಿರಾಣಿ ಅಂಗಡಿ, ಟ್ರ್ಯಾಕ್ಟರ್ ಶೂರೂಮ್, ಶಾಲೆಗಳಿಗೂ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ವಿಜಯಪುರದಲ್ಲಿ 158.8 ಎಂಎಂ ರಷ್ಟು ದಾಖಲೆ ಮಳೆಯಾಗಿದ್ದು, ಕೋಟ್ಯಾಳದಲ್ಲಿ 139 ಎಂಎಂ, ಉಕ್ಕಲಿ 112, ತಾಜಪುರ 111, ತೊರವಿ 102 ರಷ್ಟು ಸೇರಿದಂತೆ ಜಿಲ್ಲೆಯ ಇತರೆ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ಡೋಣಿ ನದಿಗೆ ಪ್ರವಾಹ ಉಂಟಾಗಿದೆ.
ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ಡೋಣಿ ನದಿ ಉಕ್ಕೇರಿ ಹರಿಯುತ್ತಿದೆ. ಹಳ್ಳ,ಕೊಳ್ಳಗಳು ತುಂಬಿ ಹರಿದವು. ಹೊಲ, ಗದ್ದೆಗಳಿಗೆ ನೀರು ನುಗ್ಗಿ ಬೆಳೆದು ನಿಂತಿದ್ದ ವಿವಿಧ ಬೆಳೆಗಳು ನೀರಲ್ಲಿ ಮುಳಗಿ ಹಾಳಾಗಿವೆ. ಮಳೆಯಿಂದ ಆಸ್ತಿಪಾಸ್ತಿ ಬಗ್ಗೆ ಇನ್ನೂ ಮಾಹಿತಿ ಬರಬೇಕಿದೆ. ಸದ್ಯಕ್ಕೆ ಯಾವುದೇ ಜೀವ ಹಾನಿ ಬಗ್ಗೆಯೂ ವರದಿಯಾಗಿಲ್ಲ.
ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಬೆಳ್ಳಬೆಳ್ಳಗ್ಗೆ ವಿಜಯಪುರ ನಗರದ ಮಳೆ ಸಂತ್ರಸ್ತರ ಪ್ರದೇಶಕ್ಕೆ ತೆರಳಿ ಅಲ್ಲಿನ ಸ್ಥಿತಿಗತಿಯನ್ನು ಖುದ್ದಾಗಿ ಪರಿಶೀಲಿಸಿದರು.
ಪೌರಾಯುಕ್ತ ವಿಜಯಕುಮಾರ ಮೆಕ್ಕಳಕಿ, ಮೇಯರ್ ಮೆಹಜಬಿನ ಹೊರ್ತಿ, ಪಾಲಿಕೆ ಸದಸ್ಯರು ಹಾಗೂ ಇತರ ಅಧಿಕಾರಿಗಳು ಇದ್ದರು.