ಹಸಿರು ಸಂಪತ್ತನ್ನು ಹೆಚ್ಚಿಸುವ ಸಂಕಲ್ಪದೊಂದಿಗೆ  ಬೀಜದುಂಡೆ ಮಾಡುವ ಯಜ್ಞ

ಸಂಜೆವಾಣಿ ವಾರ್ತೆ
ದಾವಣಗೆರೆ,ಜೂ.೪;ಮಧ್ಯ ಕರ್ನಾಟಕದಲ್ಲಿ ಹಸಿರು ಸಂಪತ್ತನ್ನು ಹೆಚ್ಚಿಸುವ ಸಂಕಲ್ಪದೊಂದಿಗೆ ಸದ್ದಿಲ್ಲದೇ ಬೀಜದುಂಡೆ ಮಾಡುವ ಯಜ್ಞ ಶುರುವಾಗಿದ್ದು, ಚಿಣ್ಣರಿಂದ ಹಿರಿಯವರೆಗೆ ಅನಕ್ಷರಸ್ಥರಿಂದ ಪದವೀಧರರವರೆಗೆ ಇಂತಹದ್ದೊಂದು ಪರಿಸರೋಪಯೋಗಿ ಮಹಾತ್ಕಾರ್ಯಕ್ಕೆ ತಮ್ಮ ಕೈಗಳನ್ನೂ ಜೋಡಿಸಿದ್ದಾರೆ.ಕಳೆದೊಂದು ವರ್ಷ ತೀವ್ರ ಬರದಿಂದ ತತ್ತರಿಸಿದ್ದ, ಜಿಲ್ಲಾ ಕೇಂದ್ರದಲ್ಲಿ ಹಿಂದೆದಿಗಿಂತಲೂ ಹೆಚ್ಚು ಬಿಸಿಲ ತಾಪ ಅನುಭವಿಸಿದ್ದು, ಉಷ್ಣ ಗಾಳಿ, ಬಿಸಿಲ ಝಳಕ್ಕೆ ಬೆಳೆಗಳು, ತೋಟದ ಬೆಳೆಗಳು ನಾಶವಾಗಿದ್ದನ್ನು ಕಳೆದೊಂದು ವರ್ಷದಲ್ಲಿ ಸ್ವತಃ ಅನುಭವಿಸಿದ ಪರಿಸರ ಪರ ಕಾಳಜಿಯ ಹತ್ತಾರು ಜನರು ಚರ್ಚಿಸಿ ಹುಟ್ಟು ಹಾಕಿದ್ದೇ ಒಂದು ಲಕ್ಷ ಬೀಜದುಂಡೆ ಮಾಡುವ ಸಂಕಲ್ಪ, ಬೀಜದುಂಡೆ ಹರಡುವ ಕನಸು.ಕಿಸಾನ್ ಬಂಧು ವ್ಯವಸಾಯ ಬೇಸಾಯ ನರ್ಸರಿ ತಂಡ, ನಮ್ಮ ದಾವಣಗೆರೆ ತಂಡ ಹಾಗೂ ಪರಿಸರ ಪ್ರೇಮಿಗಳು ಹೀಗೆ ಹತ್ತಾರು ಜನ ಕುಳಿತು ಚರ್ಚಿಸಿದ ಬೀಜದುಂಡೆ ಸಂಕಲ್ಪದಂತೆ ಈಗ ನರ್ಸರಿಯಲ್ಲಿ ಸುಮಾರು 30 ಸಾವಿರಕ್ಕೂ ಅದಿಕ ಬೀಜದುಂಡೆ ಸಿದ್ಧಗೊಂಡು, ನರ್ಸರಿಯ ನೆರಳಿನಲ್ಲಿ ತಂಪಾಗಿ ಒಣಗುತ್ತಿವೆ. ಪರಿಸರ ಸಮತೋಲನ ಕಾಪಾಡಬೇಕು, ಶುದ್ಧ ಪ್ರಾಣವಾಯು ಸಿಗಬೇಕು, ಪ್ರಾಣಿ, ಪಕ್ಷಿಗಳಿಗೆ, ಜನರು ವಿಶೇಷವಾಗಿ ಮಕ್ಕಳಿಗೂ ಹಣ್ಣುಗಳು ಸಿಗುವಂತಾಗಬೇಕು. ಈ ಮೂಲಕ ಪರಿಸರದ ಜೊತೆಗೆ ಮನ ಬಯಸುವ ಪುಣ್ಯಕಾರ್ಯಕ್ಕೆ ನಿಸ್ವಾರ್ಥಮನಸ್ಸುಗಳೂ ಕೈಸೇರಿಸುತ್ತಿವೆ.ಸದ್ಯಕ್ಕೆ ಸೀತಾಫಲ, ಪೇರಲ ಹಣ್ಣಿನ ಬೀಜದುಂಡೆಗಳು, ಮಳೆ ಮರ, ಬಾಗೆ ಮರ, ಹೊಂಗೆ, ಆಲ, ಅರಳಿ, ಬೇವು, ಕಕ್ಕೆ ಕಾಫರ್‌ ಪಾರ್‌ಟ್ರೀ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಬಗೆಯ ಬೀಜದುಂಡೆಗಳು ಸಿದ್ಧವಾಗಿವೆ. ಇನ್ನು 23 ದಿನಗಳಲ್ಲೇ ನೇರಳೆ, ಹಲಸಿನ ಬೀಜಗಳ ಬೀಜದುಂಡೆಗಳು ಸಿದ್ಧಗೊಳ್ಳಲಿವೆ. ಮಾವು ಸಹ ಈ ಪಟ್ಟಿಗೆ ಸೇರಲಿದೆ. ನಿತ್ಯವೂ ನಗರದ ಹೊರ ವಲಯದ ಶಾಬನೂರುಕುಂದುವಾಡ ಗ್ರಾಮಗಳ ಮಧ್ಯೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೆ ಕಿಸಾನ್ ಬಂಧು ವ್ಯವಸಾರ ಬೇಸಾಯ ನರ್ಸರಿ ಮತ್ತು ಕೆಫೆಯಲ್ಲಿ ಸಾವಿರಾರು ಬೀಜದುಂಡೆಸಿದ್ಧವಾಗುತ್ತಿವೆ.ನರ್ಸರಿ ಮಾಲೀಕರಾದ ಕಾರ್ತಿಕ್ ಪಾಟೀಲ್‌, ನಮ್ಮ ದಾವಣಗೆರೆಯ ರೋಹಿತ್ ಎಸ್.ಜೈನ್‌, ದಾವಣಗೆರೆ ವಿಶ್ವ ವಿದ್ಯಾನಿಲಯದ ಸೂಕ್ಷ್ಮಾಣುಜೀವಿ ವಿಭಾಗದ ಪ್ರಾಧ್ಯಾಪಕ, ಪರಿಸರ ಪ್ರೇಮಿ ಡಾ.ಎಸ್.ಶಿಶುಪಾಲ ಹೀಗೆ 10 ಜನರು ಸೇರಿ ಸಂಕಲ್ಪ ಮಾಡಿದಂತೆ 1 ಲಕ್ಷ ಬೀಜದುಂಡೆ ಪೈಕಿ ಶೇ.30ರಷ್ಟು ಸೀಡ್ ಬಾಲ್ ಸಿದ್ಧಗೊಂಡಿವೆ. ಬೆಂಗಳೂರಿನಿಂದ ವಿವಿಧ ತಳಿಯ ಬೀಜಗಳನ್ನು ತರಿಸಲಾಗಿದೆ.2,3 ಟ್ರ್ಯಾಕ್ಟರ್ ಲೋಡ್‌ ಮಣ್ಣನ್ನು ಹರಿಹರ ತಾ. ಬೆಳ್ಳೂಡಿ, ಚಿತ್ರದುರ್ಗ ಜಿಲ್ಲೆ ಭೀಮಸಮುದ್ರ ಬಳಿಯಿಂದ ತರಿಸಲಾಗಿದೆ. ಸರ್ಕಾರ, ಯಾವುದೇ ಇಲಾಖೆಯಿಂದ ನಯಾಪೈಸೆ ಬಯಸದೇ, ತಂಡದವರೇ ಹಣ ಹಾಕಿ ಇಂತಹದ್ದೊಂದು ಕಾರ್ಯಕ್ಕೆ ಮುಂದಾಗಿದ್ದಾರೆ.ಬೀಜದುಂಡೆ ಸಿದ್ಧಪಡಿಸುವ ಕಾರ್ಯಕ್ಕೆ ಕಾರ್ತಿಕ್ ಪಾಟೀಲ ತಂದೆ ಜಗದೀಶ ಪಾಟೀಲ್, ವೈಶಾಖ ಪಾಟೀಲ, ಪಕ್ಷಿ ಛಾಯಾಗ್ರಾಹಕ ಮುರುಗೇಂದ್ರ, ಇಂಜಿನಿಯರ್ ಕೊಟ್ರೇಶ, ಸತೀಶ ಬಾತಿ, ಆನಂದ ಜೈನ್, ನಿಧಿ, ಸುನಿಲ್ ಬಾಗೇವಾಡಿ, ಹರ್ಷಿತಾ ಕಂಪ್ಯೂಟರ್ಸ್ ಮಾಲೀಕ, ಸಂಕಲ್ಪ ಫೌಂಡೇಷನ್‌ ಮಹಾಂತೇಶ ತಂಡ, ಸಪ್ತಗಿರಿ ಶಾಲೆ, ಅಶ್ವಿನಿ ಆಯುರ್ವೇದಿಕ್ ಕಾಲೇಜುಮಕ್ಕಳು ಸಹ ಕೈಜೋಡಿಸಿದ್ದಾರೆ. ಮೊದಲು 50 ಸಾವಿರ ಬೀಜದುಂಡೆ ಸಿದ್ಧಪಡಿಸಿ,3,4 ತಂಡಗಳನ್ನು ಮಾಡಿ, ಎಲ್ಲೆಲ್ಲಿ ಬೀಜದುಂಡೆ ಹಾಕಬೇಕೆಂಬ ಬಗ್ಗೆ ತಂಡವು ನಿರ್ಧಾರ ಕೈಗೊಳ್ಳಲಿದೆ ಎನ್ನುತ್ತಾರೆ ಪ್ರೊ.ಎಸ್.ಶಿಶುಪಾಲ, ರೋಹಿತ್ ಎಸ್.ಜೈನ್‌, ಕಾರ್ತಿಕ್ ಪಾಟೀಲ ಇತರರು.ಸಾಮಾನ್ಯವಾಗಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ಮಕ್ಕಳು 1 ಸಾವಿರ ಬೀಜದುಂಡೆ ಮಾಡಲು 4 ಗಂಟೆ ತೆಗೆದುಕೊಳ್ಳುತ್ತಾರೆ. ಅಷ್ಟೊಂದು ಚುರುಕಾಗಿ ಮಕ್ಕಳು ಬೀಜದುಂಡೆ ಸಿದ್ಧಪಡಿಸುತ್ತಾರೆ. ಅದೇ ಹೈಸ್ಕೂಲ್ ಮಕ್ಕಳಾದರೆ ಅಷ್ಟೇ ಬೀಜದುಂಡೆ ಮಾಡಲು 4 ತಾಸು, ಮೂವರು ಹಿರಿಯರು 1 ಸಾವಿರ ಬೀಜದುಂಡೆ ಮಾಡಲು 8 ಗಂಟೆ ತೆಗೆದುಕೊಳ್ಳುತ್ತಾರೆ. ಹಾಗಾಗಿಅನೇಕ ಶಾಲೆಗಳ ಆಡಳಿತ ಮಂಡಳಿಗಳು, ಮುಖ್ಯೋಪಾಧ್ಯಾಯರು, ಶಿಕ್ಷಕರು ತಮ್ಮ ಶಾಲೆಯ ಮಕ್ಕಳ ಸಮೇತ ಬೀಜದುಂಡೆ ಮಾಡುವ ಕಾರ್ಯಕ್ಕೆ ಸಾಥ್ ನೀಡುತ್ತಿದ್ದಾರೆ. ಅದರಂತೆ ಸಪ್ತಗಿರೆ ಶಾಲೆಯ 200 ಮಕ್ಕಳು, ಅಶ್ವಿನಿ ಆಯುರ್ವೇದಿಕ್ ಕಾಲೇಜಿನ ಸುಮಾರು 35 ಜನ, ಸುಮಾರು 75ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಣೆಯಿಂದ ಕೈಜೋಡಿಸಿದ್ದಾರೆ.ಹದಡಿ ಕೆರೆ, ಕೊಂಡಜ್ಜಿ ಕೆರೆ, ಆವರಗೆರೆ ಕೆರೆ, ಹೊನ್ನೂರು ಸಮೀಪದ ಕೆರೆ, ಅಗಸನಕಟ್ಟೆ ಕೆರೆ, ಅರಣ್ಯ ಪ್ರದೇಶ, ಭದ್ರಾ ನಾಲೆಗಳ ಏರಿ ಸಮೀಪ, ಸರ್ಕಾರಿ ಜಾಗಗಳು, ಅರಣ್ಯ ಪ್ರದೇಶದಲ್ಲಿಬೀಜದುಂಡೆ ಹಾಕುವ ಗುರಿ ತಂಡದ್ದು. ಬೀಜದುಂಡೆ ಹಾಕಿದ ನಂತರ ಮಳೆ ಬಂದ 2-3 ದಿನದಲ್ಲಿ ತೇವಾಂಶವನ್ನು ಹೀರಿಕೊಂಡು ಬೀಜದುಂಡೆಯ ಬೀಜ ಮೊಳೆಯೊಡೆಯಲಾರಂಭಿಸುತ್ತದೆ.23 ದಿನ ಸತತ ಮಳೆ ಬಂದರೆ ಬೇಗ ಮೊಳೆಕೆಯೊಡೆದು, ಸಸಿ ಬೆಳೆಯುತ್ತದೆನ್ನುತ್ತಾರೆ. ಹಾಗೆಯೇ ಹಾಕಿದ ಬೀಜವೆಲ್ಲಾ ಮೊಳಕೆಯೊಡೆಯುತ್ತದೆಂಬ ನಿರೀಕ್ಷೆಯೂ ಇರುವುದಿಲ್ಲ ಎಂದು ಹೇಳುತ್ತಾರೆ ಕಾರ್ತಿಕ ಪಾಟೀಲ.
.