ಜನ ಸಾಮಾನ್ಯರ ಗೆಲುವು: ಯಧುವೀರ ಗೆಲುವು
ಸಂಜೆವಾಣಿ ನ್ಯೂಸ್
ಮೈಸೂರು.ಜೂ.05:- ಇದು ಜನಸಾಮಾನ್ಯರ ಗೆಲುವು. ಚಾಮುಂಡಿ ತಾಯಿ ಮತ್ತು ಕಾವೇರಮ್ಮನ್ನ ಆಶೀರ್ವಾದದಿಂದ ನಾನು ಗೆದ್ದಿದ್ದೇನೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದೇ ಗೆಲುವು ಸಿಕ್ಕಿರುವುದನ್ನು ಎಂದೂ ಮರೆಯಲಾಗದು ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂತಸ ಹಂಚಿಕೊಂಡರು.
ತಮ್ಮ ಗೆಲುವು ಖಚಿತವಾಗುತ್ತಿದಂತೆ ಮತ ಎಣಿಕೆ ಕೇಂದ್ರಕ್ಕೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಗೆಲುವಿನ ನಗೆ ಬೀರುತ್ತಾ ಮತದಾರರಿಗೆ ಮತ್ತು ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸಿದರು.
ಚುನಾವಣಾ ಸಮಯದಲ್ಲಿ ಮಾತ್ರ ರಾಜಕೀಯ ಮಾಡಬೇಕಾಗುತ್ತದೆ. ನಂತರ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಐದು ವರ್ಷಗಳ ಕಾಲ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡಲಾಗುತ್ತದೆ..ಮೈಸೂರು-ಕೊಡಗು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯನ್ನು ಸ್ಪಷ್ಟವಾಗಿ ಮಾಡುತ್ತೇವೆ. ಇದಕ್ಕೆ ಎಲ್ಲರೂ ಕುಳಿತು ರೂಪರೇಷೆ ಸಿದ್ಧ ಮಾಡಿಕೊಳ್ಳಲಾಗಿದೆ ಎಂದರು.
ಮುಂದಿನ 5 ವರ್ಷ ನೀವು ಯಾವುದೇ ಪಕ್ಷದಲ್ಲಿ ಇರಿ, ಯಾವುದೇ ಸಿದ್ಧಾಂತ ಅನುಸರಿಸಿ ಎಲ್ಲರಿಗೂ ಕೆಲಸ ಮಾಡಿಕೊಡುತ್ತೇನೆ. ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ನನ್ನ ಮೇಲಿನ ಪ್ರೀತಿಯಿಂದ, ವಿಶ್ವಾಸವಿಟ್ಟು ಅಧಿಕಾರ ನೀಡಿದ್ದೀರಿ, ನಿಮ್ಮ ಋಣ ತೀರಿಸುತ್ತೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಸಾಮಾಜಿಕ ಕಾರ್ಯಗಳನ್ನು ನೋಡಿ ಜನರು ಮತವನ್ನು ಹಾಕಿದ್ದಾರೆ. ಜೆಡಿಎಸ್ ಮೈತ್ರಿಯೂ ಕಾರಣವಾಗಿದೆ. ಮೈಸೂರು-ಕೊಡಗು ಭಾಗದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ನಮ್ಮ ಕೈ ಹಿಡಿದಿವೆ. ಇದಲ್ಲದೇ ನಮ್ಮ ಮಹಾರಾಜರ ಕೊಡುಗೆಗಳನ್ನು ಹಾಗೂ ಆಡಳಿತವನ್ನು ಸ್ಮರಿಸಿಕೊಂಡು ಜನರು ಮತ ನೀಡಿದ್ದಾರೆ.
ಈ ಚುನಾವಣೆಯಲ್ಲಿ ಜಾತಿ-ಮತ-ಧರ್ಮಗಳ ವಿಚಾರವನ್ನು ಉಲ್ಲೇಖ ಮಾಡದೇ ಮತಯಾಚನೆ ಮಾಡಿದ್ದೇವೆ. ಜನರು ಕೂಡ ಇದೇ ನಿಟ್ಟಿನಲ್ಲಿ ಸ್ಪಂದಿಸಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದ ಜನ ಜಾತಿಯನ್ನು ನೋಡದೇ ನಾವೆಲ್ಲ ಭಾರತೀಯರು, ಭಾರತಕ್ಕಾಗಿ ನಮ್ಮ ವೋಟು ಎನ್ನುವ ಮನೋಭಾವದಿಂದ ಮತವನ್ನು ಹಾಕಿದ್ದಾರೆ ಎಂದರು.
ರಾಜ್ಯ ಮತ್ತು ರಾಷ್ಟ್ರದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನ ಗೆದ್ದಿಲ್ಲ ನಿಜ. ಆದರೂ ಮೈತ್ರಿ ಪಕ್ಷಗಳೊಂದಿಗೆ ಸೇರಿ ನಾವೇ ಸರ್ಕಾರ ರಚನೆ ಮಾಡುತ್ತೇವೆ. ಸರ್ಕಾರದ ಮಂತ್ರಿಗಳು ನಮ್ಮ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಲಿದ್ದಾರೆ ಎಂದು ನೂತನ ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣಾ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮಗೆ ಬಹಳ ಕಠಿಣವಾದ ಸವಾಲನ್ನೇ ಒಡ್ಡಿದ್ದರು. ಸಹಜವಾಗಿ ಅದು ಇದ್ದದ್ದೇ. ಆದರೆ ನಾವು ಅದನ್ನು ಲಘುವಾಗಿ ತಗೆದುಕೊಳ್ಳಲಿಲ್ಲ. ಮುಂದೆ ಎಲ್ಲರ ಸಹಕಾರದಲ್ಲಿ ನಮ್ಮ ಕೆಲಸ ನಾವು ಮಾಡಿಕೊಂಡು ಹೋಗುತ್ತೇವೆ. ನಾಲ್ವಡಿ ಅವರ ಜಯಂತಿ ದಿನವೇ ನಮಗೆ ಗೆಲುವು ದೊರೆತ್ತಿದೆ. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಮಾದರಿಯಲ್ಲೇ ನಾವು ಕೆಲಸ ಮಾಡುತ್ತೇವೆ ಎಂದರು.
ದೇಶದಲ್ಲಿ ನಿರೀಕ್ಷಿಸಿದಷ್ಟು ಪಕ್ಷಕ್ಕೆ ಸೀಟುಗಳು ಬಂದಿಲ್ಲ. ಆದರೆ, ಎನ್‍ಡಿಎ ಮೈತ್ರಿಕೂಟ ಬಹುಮತ ಪಡೆದಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಜಿ.ಟಿ.ದೇವೇಗೌಡ, ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮುಖಂಡ ಅರುಣ್ ಕುಮಾರ್ ಗೌಡ ಇತರರಿದ್ದರು.