ಯಧುವೀರ ಜಯಭೇರಿ
ಸಂಜೆವಾಣಿ ನ್ಯೂಸ್
ಮೈಸೂರು.ಜೂ.05:- ಬಹು ನಿರೀಕ್ಷಿತ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಫಲಿತಾಂಶ ಹೊರ ಬಿದ್ದಿದ್ದು, ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು 139232 ಮತಗಳ ಭಾರೀ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ವಿರುದ್ಧ ಜಯಶೀಲರಾದರು.
ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ವಾಣಿಜ್ಯ ಕಾಲೇಜು ಕಟ್ಟಡದಲ್ಲಿ ನಡೆದ ಮತ ಎಣಿಕೆಯಲ್ಲಿ ಪ್ರಾರಂಭದಿಂದಲೂ ಮುನ್ನಡೆ ಸಾಧಿಸಿದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಧ್ಯಾಹ್ನದ ವೇಳೆಗೆ ಗೆಲುವಿನ ನಗೆ ಬೀರಿದರು. ಅಧಿಕೃತವಾಗಿ ಮಧ್ಯಾಹ್ನ 4ಗಂಟೆ ವೇಳೆಗೆ ಅಂತಿಮವಾಗಿ 17ನೇ ಸುತ್ತಿನ ಮತಎಣಿಕೆಯ ಫಲಿತಾಂಶದೊಂದಿಗೆ ಅಧಿಕೃತ ಗೆಲುವನ್ನು ಸಾಧಿಸಿದರು. ಬೆಳಿಗ್ಗೆ ಚುನಾವಣೆ 7.45ಕ್ಕೆ ಮತಎಣಿಕೆ ಕೇಂದ್ರದವನ್ನು ತೆರೆಯಲಾಯಿತು. ಮೊದಲ ಬಾರಿಗೆ ಅಂಚೆ ಮತಗಳನ್ನು ಎಣಿಸುವ ಕಾರ್ಯ ನಡೆಯಿತು. ಬೆಳ್ಳಿಗ್ಗೆ 9 ಗಂಟೆಗೆ ಮೊದಲ ಸುತ್ತಿನ ಮತ ಎಣಿಕೆ ಕಾರ್ಯ ಪ್ರಾರಂಭವಾಯಿತು. ನಂತರ ಮಧ್ಯಾಹ್ನ 4ರವರೆಗೆ 17 ಸುತ್ತಿನ ಮತಎಣಿಕೆ ಕಾರ್ಯ ನಡೆಯಿತು.
ಈ ವೇಳೆ ಸತತ 17 ಸುತ್ತುಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ವಿರುದ್ಧ ಯಧುವೀರ್ ಮುನ್ನಡೆ ಸಾಧಿಸುತ್ತಲೇ ಬಂದಿದ್ದರು. ಹೀಗಾಗಿ ಭಾರೀ ಅಂತರದ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಮಧ್ಯಾಹ್ನದ 2ಗಂಟೆ ವೇಳೆಗಾಗಲೇ ಯಧುವೀರ್ ಅವರ ಗೆಲುವು ಖಚಿತವಾಯಿತು. ಒಟ್ಟು 7,95503 ಮತಗಳಿಸಿದ ಯಧುವೀರ್ ಹಾಗೂ ಕಾಂಗ್ರೆಸ್‍ನ ಎಂ.ಲಕ್ಷ್ಮಣ್ 656241 ಪಡೆಯಲಷ್ಟೇ ಸಾಧ್ಯವಾಯಿತು. 138647ಮತಗಳ ಅಂತರದಿಂದ ಯಧುವೀರ್ ಜಯಭೇರಿ ಭಾರಿಸಿದರು.
ನಾಲ್ವಡಿಗೆ ನಮಿಸಿ ಬಂದ ಯಧುವೀರ್: ನಾಲ್ವಡಿ ಕೃಷ್ಣರಾಜ ಒಡೆಯರ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶುಭ ಕೋರಿದ ಬಳಿಕ ಮತಗಟ್ಟೆಗೆ ಆಗಮಿಸಿದರು. ನಂತರ ಕಾರ್ಯಕರ್ತರ ಜತೆಗೂಡಿ ರಮ್ಯಾ ಹೋಟೆಲ್‍ನಲ್ಲಿ ಚಹಾ ಸೇವಿಸಿದರು. ಬಳಿಕ ಸಂಜೆ 5.30ಕ್ಕೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಶಾಸಕ ಜಿ.ಟಿ.ದೇವೇಗೌಡ, ತಾಯಿ ಪ್ರಮೋದದೇವಿ ಒಡೆಯರ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಅವರ ಜತೆಗೂಡಿ ಚುನಾವಣಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಂದ ನೇಮಕಾತಿ ಆದೇಶ ಪತ್ರ ಪಡೆದುಕೊಂಡರು. ಬಿಜೆಪಿ ಕಚೇರಿಯಲ್ಲಿ ಸಂಭ್ರಮ: ಮಧ್ಯಾಹ್ನದ ವೇಳೆ ಗೆಲುವು ಖಚಿತ ಎನ್ನುತ್ತಿದ್ದಂತೆ ಬಿಜೆಪಿ ಶಾಸಕ ಶ್ರೀವತ್ಸ ಹಾಗೂ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ನೇತೃತ್ವದಲ್ಲಿ ನೂರಾರು ಮಂದಿ ಕಾರ್ಯಕರ್ತರು ಜಮಾವಣೆಗೊಂಡು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಾತ್ರವಲ್ಲದೆ, ಅತಿಹೆಚ್ಚು ಮತಗಳಿಸಲು ಶ್ರಮಿಸಿದ ಶಾಸಕ ಹಾಗೂ ನಗರಾಧ್ಯಕ್ಷರಿಗೆ ಕಾರ್ಯಕತರ್ತರು ಹಾರ ಹಾಕಿ ಸಿಹಿ ವಿತರಿಸಿ ಸಂಭ್ರಮಿಸಿದರು. ಬಿಗಿ ಪೆÇಲೀಸ್ ಭದ್ರತೆ: ಪಡುವಾರಹಳ್ಳಿಯ ಮತಗಟ್ಟೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ 200 ಮೀಟರ್ ಸುತ್ತಲೂ ನಿಷೇಧಾಜ್ಞೆ ಹಾಕಲಾಗಿತ್ತು. ಅಲ್ಲದೆ, ಪೆÇಲೀಸರು ಹಾಗೂ ಚುನಾವಣಾಧಿ ಕರ್ತವ್ಯ ನಿರತರಿಗೆ ಮಾತ್ರ ಅವಕಾಶ ನೀಡಲಾಗಿತ್ತು.