ನಿರುದ್ಯೋಗ ಸಮಸ್ಯೆ, ನೀರಾವರಿ ಯೋಜನೆಗೆ ಆದ್ಯತೆ
ಕೋಲಾರ,ಜೂ. ೫: ಯುವಕರಿಗೆ ಉದ್ಯೋಗ, ನೀರಾವರಿ ಯೋಜನೆಗಳ ಜಾರಿ ನನ್ನ ಮೊದಲ ಆದ್ಯತೆಯಾಗಿದ್ದು, ನನಗೆ ಅವಕಾಶ ನೀಡಿದ ಕೋಲಾರ ಲೋಕಸಭಾ ಕ್ಷೇತ್ರದ ಎಲ್ಲಾ ಮತದಾರರಿಗೂ, ಬಿಜೆಪಿ,ಜೆಡಿಎಸ್ ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ನೂತನ ಸಂಸದರಾಗಿ ಆಯ್ಕೆಯಾದ ಎಂ.ಮಲ್ಲೇಶಬಾಬು ತಿಳಿಸಿದರು.
ಕೋಲಾರ ಲೋಕಸಭಾ ಚುನಾವಣೆ ಮತ ಎಣಿಕೆ ನಂತರ ಮಾಧ್ಯಮದರೊಂದಿಗೆ ಮಾತನಾಡಿ, ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಸೋಲಿಸಿದರೂ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಅಂತರ ಕೊಟ್ಟ ಬಂಗಾರಪೇಟೆ ಕ್ಷೇತ್ರದ ಮತದಾರರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಗೆಲುವಿನ ಅಂತರ ೬೦ ರಿಂದ ೮೦ ಸಾವಿರ ಎಂದು ಮೊದಲೇ ನಿರೀಕ್ಷಿಸಿದ್ದೇ ಅದರಂತೆಯೇ ಫಲಿತಾಂಶ ಬಂದಿದೆ, ನನಗೆ ಬಂದಿರುವ ೬.೮೦ ಲಕ್ಷ ಮತಗಳು ಕಡಿಮೆಯೇನಲ್ಲ, ಕ್ಷೇತ್ರದ ಜನತೆ ನನ್ನನ್ನು ಬೆಂಬಲಿಸಿದ್ದಾರೆ ಎಂದರು.
ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗುವುದೇ ಎಂಬ ಪ್ರಶ್ನೆಗೆ ಅದು ಬಿಜೆಪಿ ಮತ್ತು ಜೆಡಿಎಸ್ ಹೈಕಮಾಂಡ್‌ಗೆ ಬಿಟ್ಟ ವಿಷಯ, ಎರಡೂ ಪಕ್ಷಗಳು ನನಗೆ ಲೋಕಸಭೆ ಹೋಗಲು ಅವಕಾಶ ಕಲ್ಪಿಸಿದೆ. ಕ್ಷೇತ್ರದ ಜನತೆ ಆಶೀರ್ವಾದದಿಂದ ನನಗೆ ಈ ಅವಕಾಶ ಸಿಕ್ಕಿದೆ ಎಂದು ಹೇಳಿದರು.
ನಿಕಟಪೂರ್ವ ಸಂಸದ ಎಸ್.ಮುನಿಸ್ವಾಮಿ, ಶಾಸಕ ಸಮೃದ್ದಿ ಮಂಜುನಾಥ್, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ವೈ.ಸಂಪಂಗಿ, ಮಂಜುನಾಥಗೌಡ, ಎಂಎಲ್‌ಸಿ ಇಂಚರ ಗೋವಿಂದರಾಜು, ಮುಖಂಡ ಸಿಎಂಆರ್.ಶ್ರೀನಾಥ್ ಇದ್ದರು.