ಹೆಚ್.ಡಿ.ಕುಮಾರಸ್ವಾಮಿ ಗೆಲುವು: ಸಂಭ್ರಮಾಚರಣೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.05: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.
ಪಟ್ಟಣದ ಬಸವೇಶ್ವರ ನಗರದ ಶಾಸಕರ ಕಛೇರಿಯ ಆವರಣದಲ್ಲಿ ಮತ್ತು ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಮತ್ತು ಪಟ್ಟಣದ ಹೊರವಲಯದಲ್ಲಿರುವ ತಾಲ್ಲೂಕು ಹೆಚ್.ಡಿ.ದೇವೇಗೌಡ ಅಭಿಮಾನಿಗಳ ಸಂಘದ ಕಛೇರಿಯ ಬಳಿ ಮೈತ್ರಿ ಪಕ್ಷಗಳ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಈ ಕುರಿತು ಮಾತನಾಡಿದ ತಾಲ್ಲೂಕು ಹೆಚ್.ಡಿ.ದೇವೇಗೌಡ ಅಭಿಮಾನಿ ಬಳಗದ ಅಧ್ಯಕ್ಷ ಗೌರೀಶ್ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿದ್ದ ಮಾಜಿ ಸಿ.ಎಂ ಕುಮಾರಸ್ವಾಮಿಯವರು ಗೆದ್ದೇ ಗೆಲ್ಲುತ್ತಾರೆ ಎಂಬ ಆಶಾಭಾವನೆ ನಮಗೆ ಇತ್ತು. ಆದರೆ ಜಿಲ್ಲೆಯ ಮತದಾರರು ಇಷ್ಟೊಂದು ಪ್ರಮಾಣದ ಮತಗಳನ್ನು ನೀಡುತ್ತಾರೆ ಎಂದು ಊಹಿಸಿರಲಿಲ್ಲ. ಜಿಲ್ಲೆಯ ಜನರ ನೂರು ದಿನಗಳಿಗೂ ಹೆಚ್ಚು ಕಾಲ ಸತ್ಯಾಗ್ರಹ, ಮಾಡಿದರೂ ಕಾವೇರಿ ನೀರನ್ನು ನಿರಂತರವಾಗಿ ತಮಿಳುನಾಡಿಗೆ ಹರಿಸಿ ಜಿಲ್ಲೆಯ ರೈತರ ಕಣ್ಣಲ್ಲಿ ನೀರು ಹಾಕಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಏಳಕ್ಕೆ ಏಳು ಜೆಡಿಎಸ್ ಶಾಸಕರಿದ್ದರೂ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಧೋರಣೆಯದಾಗಿ ಜೆಡಿಎಸ್ ಅಭ್ಯರ್ಥಿ ಸೋಲಬೇಕಾಯಿತು. ಆದರೆ ಅದೇ ಸನ್ನಿವೇಶ ಈಗ ಮರುಕಳಿಸಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಆರು ಶಾಸಕರು ಹಾಗೂ ಸಚಿವರು, ವಿಧಾನ ಪರಿಷತ್ ಸದಸ್ಯರು ಇದ್ದರೂ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಜಿಲ್ಲೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಕುಮಾರಣ್ಣ ಜಯಗಳಿಸಿರುವುದು ಜಿಲ್ಲಾಕಾಂಗ್ರೆಸ್‍ಗೆ ನುಂಗಲಾರದ ತುತ್ತಾಗಿದೆ. ಜಿಲ್ಲೆಯಲ್ಲಿ ಜೆಡಿಎಸ್ ಪರ ಅಲೆ ಇರುವುದು ಈ ಚುನಾವಣೆಯಲ್ಲಿ ಸಾಬೀತಾಗಿದೆ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಸರ್ಕಾರದ ಕೈ ಹಿಡಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಗ್ಯಾರಂಟಿ ಯೋಜನೆಗಳು ಕುಟುಂಬಗಳಲ್ಲಿ ಅಸಮಾಧಾನ ತರುವಂತೆ ಮಾಡಿವೆ. ಗೃಹಲಕ್ಷ್ಮಿ ಹಣ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಯುವನಿಧಿಯ ಹಣ ಕೆಲವರಿಗೆ ಮಾತ್ರ ಬರುತ್ತಿದೆ. ಅಕ್ಕಿ ಸರಿಯಾಗಿ ಕೊಡುತ್ತಿಲ್ಲ. ಬಸ್ಸುಗಳಲ್ಲಿ ಪುರುಷರು ಹಾಗೂ ಯುವಕರು, ವಿದ್ಯಾರ್ಥಿಗಳು ಅನುಭವಿಸುತ್ತಿರುವ ಯಾತನೆಗಳು ಅಷ್ಟಿಷ್ಟಲ್ಲಾ ಈ ಎಲ್ಲಾ ಅಂಶಗಳು ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿ ಪರಿಣಮಿಸಿವೆ.
ಕರುನಾಡಿನಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಜನರ ಮನಸ್ಸನ್ನು ಗೆದ್ದಿರುವ ಕುಮಾರಸ್ವಾಮಿಯವರಿಗೆ ಕೇಂದ್ರದಲ್ಲಿ ಕೃಷಿ ಸಚಿವರ ಹುದ್ದೆ ದೊರಕಲಿ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಹೀಗೆ ಮುಂದುವರಿಯಲಿ ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಹೆಚ್.ಡಿ.ದೇವೇಗೌಡ ಅಭಿಮಾನಿಗಳ ಸಂಘದ ಉಪಾದ್ಯಕ್ಷ ಚಿಕ್ಕೋನಹಳ್ಳಿನಾಗರಾಜು, ಜಿಪಂ ಮಾಜಿ ಅಧ್ಯಕ್ಷ ಆರ್.ಕೆ.ಕುಮಾರ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ನಾಗೇಶ್, ಜೆಡಿಎಸ್ ಮುಖಂಡರಾದ ಮಂಜೇಗೌಡ, ಕುಂದನಹಳ್ಳಿಶಿವಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಕೊರಟಿಕೆರೆದಿನೇಶ್, ಅಂಚನಹಳ್ಳಿಸುಬ್ಬಣ್ಣ, ಹೆರಗನಹಳ್ಳಿಬಸವರಾಜು, ರೇಣುಕಪ್ಪ, ನಂಜುಂಡಪ್ಪ, ಸೇರಿದಂತೆ ಹಲವರು ಹಾಜರಿದ್ದರು.