ಕೆನರಾ ಬ್ಯಾಂಕ್ ವಿರುದ್ಧ ರೈತಮುಖಂಡರ ಧರಣಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.05: ಸಾಲ ತೀರುವಳಿ ಮಾಡಿದ್ದರೂ ತೀರುವಳಿ ಪತ್ರ (ಎನ್.ಓ.ಸಿ) ನೀಡದೆ ಸತಾಯಿಸುತ್ತಿರುವ ಪಟ್ಟಣದ ಕೆನರಾ ಬ್ಯಾಂಕ್ ಧೋರಣೆಯ ವಿರುದ್ದ ತಾಲೂಕು ರೈತ ಮುಖಂಡರು ಬ್ಯಾಂಕಿನ ಆವರಣದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ರೈತ ಮುಖಂಡ ಸಿಂಧಘಟ್ಟ ಮುದ್ದುಕುಮಾರ್ ನೇತೃತ್ವದಲ್ಲಿ ಪಟ್ಟಣದ ಹೊಸ ಕಿಕ್ಕೇರಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖಾ ಕಛೇರಿಗೆ ಆಗಮಿಸಿದ ರೈತ ಮುಖಂಡರು ಬ್ಯಾಂಕಿನ ಕಾರ್ಯವೈಕರಿಯ ವಿರುದ್ದ ಕಿಡಿಕಾರಿದ್ದಾರೆ.
ತಾಲೂಕಿನ ಬೂಕನಕೆರೆ ಹೋಬಳಿಯ ಮಡುವಿನಕೋಡಿ ಗ್ರಾಮದ ರಂಗಸ್ವಾಮಿ ಎನ್ನುವ ರೈತರ ಮಗಳು ಎಂ.ಆರ್.ಲಿಖಿತಾ ಅವರು ಕಳೆದ 08 ವರ್ಷಗಳ ಹಿಂದೆ ತಾವು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಕೆನರಾ ಬ್ಯಾಂಕಿನಿಂದ 3.20 ಲಕ್ಷ ರೂ ಶಿಕ್ಷಣ ಸಾಲ ಪಡೆದಿದ್ದರು. ನಿರುದ್ಯೋಗ ಸಮಸ್ಯೆಯಿಂದ ಸಕಾಲಕ್ಕೆ ಸಾಲ ತೀರಿಸಲಾಗಿರಲಿಲ್ಲ. ಈ ಬಗ್ಗೆ ಕೆನರಾ ಬ್ಯಾಂಕ್ ಸಾಲ ತೀರುವಳಿ ಮಾಡದ ಎಂ.ಆರ್.ಲಿಖಿತಾ ಅವರಿಗೆ ನ್ಯಾಯಾಲಯದ ಮೂಲಕ ನೋಟಿಸ್ ಕಳುಹಿಸಿತ್ತು. ಅನಂತರದ ಬೆಳವಣಿಗೆಯಲ್ಲಿ ಸಾಲ ಪಡೆದುಕೊಂಡಿದ್ದ ಎಂ.ಆರ್.ಲಿಖಿತಾ ಅವರು ಬ್ಯಂಕ್ ಮ್ಯಾನೇಜರ್ ಸೂಚನೆಯ ಮೇರೆಗೆ 1.80 ಲಕ್ಷ ರೂ ಕಟ್ಟಿ ಒನ್ ಟೈಮ್ ಸೆಟಲ್ ಮೆಂಟ್ ಯೋಜನೆಯ ಮೂಲಕ 2023ರ ಮಾರ್ಚ್ 31 ರಂದು ಸಾಲ ತೀರುವಳಿ ಮಾಡಿದ್ದಾರೆ. ಸಾಲ ತೀರುವಳಿ ಮಾಡಿ ಒಂದು ವರ್ಷ ಕಳೆದಿದ್ದರೂ ಬ್ಯಾಂಕ್ ಇದುವರೆಗೂ ಎಂ.ಆರ್.ಲಿಖಿತಾ ಅವರಿಗೆ ಸಾಲ ತೀರುವಳಿ ಪತ್ರ ನೀಡಿಲ್ಲ. ಈ ಬಗ್ಗೆ ಹತ್ತಾರು ಸಲ ಬ್ಯಾಂಕ್ ಮೆಟ್ಟಿಲೇರಿದ್ದರೂ ಬ್ಯಾಂಕಿನ ವ್ಯವಸ್ಥಾಪಕರು ಸಲ್ಲದ ಸಬೂಬು ಹೇಳಿ ಇಂದು ನಾಳೆ ಎನ್ನುತ್ತಾ ಕಾಲ ತಳ್ಳುತ್ತಿದ್ದಾರೆ. ಇದರಿಂದಾಗಿ ಲಿಖಿತಾ ಅವರ ಸಾಲಕ್ಕೆ ಜಾಮೀನು ಹಾಕಿದ್ದ ರೈತ ಮಡುವಿನಕೋಡಿ ಪ್ರಕಾಶ್ ಅವರಿಗೆ ಯಾವುದೇ ಬ್ಯಾಂಕುಗಳು ಸಾಲ ನೀಡದೆ ಅವರು ಕೃಷಿ ಚಟುವಟಿಕೆಗೆ ಅಗತ್ಯ ಹಣ ಹೊಂದಿಸಲಾಗದೆ ಪರದಾಡುತ್ತಿದ್ದಾರೆ.
ಸಾಲ ತೀರುವಳಿ ಮಾಡಿದ್ದರೂ ಸಕಾಲಕ್ಕೆ ಸಾಲ ತೀರುವಳಿ ಪ್ರಮಾಣ ಪತ್ರ ನೀಡದೆ ಅಮಾಯಕ ರೈತ ಕುಟುಂಬಗಳಿಗೆ ಕಿರುಕುಳ ನೀಡುತ್ತಿರುವ ಪಟ್ಟಣದ ಕೆನರಾ ಬ್ಯಾಂಕ್ ಕಾರ್ಯವೈಕರಿಯ ವಿರುದ್ದ ರೈತ ಮುಖಂಡರು ಧರಣಿ ಆರಂಭಿಸಿದ್ದು ತೀರುವಳಿ ಪತ್ರ ನೀಡುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಧರಣಿ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ರೈತ ಮುಖಂಡ ಮುದ್ದುಕುಮಾರ್ ನಾವು ಇಂದು ಏಕಾಏಕಿ ಧರಣಿಗೆ ಕುಳಿತಿಲ್ಲ. ಸಮಸ್ಯೆ ಬಗೆಹರಿಸಿ ರೈತರಿಗೆ ಅನುಕೂಲ ಮಾಡಿಕೊಡದಿದ್ದರೆ ಧರಣಿ ನಡೆಸುವುದಾಗಿ ಕಳೆದ 10 ದಿನಗಳ ಹಿಂದೆಯೇ ಬ್ಯಾಂಕಿಗೆ ಲಿಖಿತ ಸೂಚನೆ ನೀಡಿದ್ದೇವೆ.ಅದರಂತೆ ಸಾಲ ತೀರುವಳಿ ಪ್ರಮಾಣ ಪತ್ರ ನೀಡುವುದಾಗಿ ನಾವು ಧರಣಿ ನಡೆಸದಂತೆ ದಾರಿ ತಪ್ಪಿಸಿದ ಬ್ಯಾಂಕಿನ ವ್ಯವಸ್ಥಾಪಕರು ಕೊಟ್ಟ ಮಾತಿನಂತೆ ನಡೆದುಕೊಳ್ಳದ ಕಾರಣ ಧರಣಿ ಆರಂಭಿಸಿದ್ದೇವೆ. ಸಾಲ ತೀರುವಳಿ ಪತ್ರ ಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದು ಧರಣಿ ಮುಂದುವರಿಸಿದ್ದಾರೆ.