ಜಿಗಜಿಣಗಿಗೆ ಕೈ ಹಿಡಿದ ಮೋದಿ ಹವಾ….ಕಾಂಗ್ರೆಸ್‍ಗೆ ಮುಳುವಾಯ್ತಾ ಅತಿಯಾದ ನಂಬುಗೆ
ರುದ್ರಪ್ಪ ಆಸಂಗಿ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.5:ಬಿಜೆಪಿ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ವಿಜಯಪುರ ಎಸ್.ಸಿ. ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಕಂಡಿದ್ದ ಗೆಲುವಿನ ಕನಸು ನುಚ್ಚು ನೂರಾಗಿ ಹೀನಾಯ ಸೋಲು ಅನುಭವಿಸಿ ಕಾಂಗ್ರೆಸ್‍ಗೆ ಭಾರಿ ಮುಖಭಂಗವಾಗಿದೆ.
ಹಾಲಿ ಸಂಸದ ರಮೇಶ ಜಿಗಜಿಣಗಿ ಆವರು ಸತತ ನಾಲ್ಕನೇ ಬಾರಿಯೂ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಪ್ಲಸ್ ಸಾಧನೆ ಮಾಡಿ ಹೊಸ ದಾಖಲೆ ಸೃಷ್ಟಿ ಮಾಡಿದ್ದಾರೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಸತತ ಮೂರು ಹಾಗೂ ವಿಜಯಪುರ ಲೋಕಸಭೆ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಸೇರಿ ಒಟ್ಟು 7 ಸಲ ಲೋಕಸಭೆಗೆ ಆಯ್ಕೆಯಾಗುವ ಮೂಲಕ ರಾಜ್ಯದ ಅತ್ಯಂತ ಹಿರಿಯ ಸಂಸದರು ಎಂಬ ಹೆಗ್ಗಳಿಕೆಗೂ ಜಿಗಜಿಣಗಿ ಪಾತ್ರರಾಗಿದ್ದಾರೆ.
ಆದರೆ ಈ ಬಾರಿ ಕಾಂಗ್ರೆಸ್ ಪಕ್ಷ ದಲಿತ ಸಮುದಾಯದ ಬಲಗೈ ಸಮುದಾಯಕ್ಕೆ ಸೇರಿದ ಮಾಜಿ ಶಾಸಕ ರಾಜು ಆಲಗೂರ ಆವರಿಗೆ ಟಿಕೆಟ್ ನೀಡಿ ಬಿಜೆಪಿ ಭದ್ರಕೋಟೆ ಛಿದ್ರ ಮಾಡುವ ಪ್ಲಾನ್ ಮಾಡಿತ್ತು. ಅದಕ್ಕೆಂದೇ ಕಾಂಗ್ರೆಸ್ ಪಕ್ಷದ ವರಿಷ್ಠರು ಜಿಲ್ಲೆಯಲ್ಲಿ ಇರುವ ಆರು ಜನ ಕಾಂಗ್ರೆಸ್ ಶಾಸಕರ ಹೆಗಲಿಗೆ ರಾಜು ಆಲಗೂರ ಅವರ ಗೆಲುವಿನ ಹೊಣೆ ವಹಿಸಿದ್ದರು. ಆರು ಜನ ಶಾಸಕರಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಇಬ್ಬರು ಸಚಿವರಿದ್ದಾರೆ. ಆದಾಗ್ಯೂ ಕಾಂಗ್ರೆಸ್ ಗೆಲವು ಸಾಧಿಸದೇ ಇರುವುದು ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ.
ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಗೆಲುವಿಗೆ ಹೃಕಮಾಂಡ್ ಕಾಂಗ್ರೆಸ್ ನಾಯಕರಿಗೆ ಟಾಸ್ಕ್ ನೀಡಿತ್ತು. ಜಿಲ್ಲೆಯ ಇಬ್ಬರು ಸಚಿವರು ಸೇರಿ ನಾಲ್ವರು ಕಾಂಗ್ರೆಸ್ ಶಾಸಕರು ಪಕ್ಷದ ಅಭ್ಯರ್ಥಿ ಗೆಲುವಿಗೆ ಪಣ ತೊಟ್ಟಿದ್ದರು. ಜಿಲ್ಲೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲರೂ ಸೇರಿ ಎಲ್ಲ ಶಾಸಕರು ತಮ್ಮ ಕ್ಷೇತ್ರದಲ್ಲಿ ಇದನ್ನು ಸವಾಲಾಗಿ ಸ್ವೀಕರಿಸಿ ಬಿಜೆಪಿ ಸೋಲಿಸಲು ಶತಾಯ ಗತಾಯ ಶ್ರಮಿಸಿದ್ದರು. ಆದರೂ ಕಾಂಗ್ರೆಸ್ ಅಭ್ಯರ್ಥಿ ಸೋಲನುಭವಿಸಿರುವುದು ಕಾಂಗ್ರೆಸ್ಸಿಗೆ ಭಾರಿ ಮುಖಭಂಗವಾಗಿದೆ.
ಗೆಲುವು ತನ್ನದೇ ಎಂದು ಬೀಗಿದ ಕಾಂಗ್ರೆಸ್‍ಗೆ ಅತಿಯಾದ ನಂಬುಗೆಯೇ ಮುಳುವಾಯಿತು. ಚುನಾವಣೆ ಇನ್ನೂ ಅಣತಿ ದೂರ ಇರುವಾಗಲೇ ಕಾಂಗ್ರೆಸ್ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿತ್ತು. ಆಗ ಮತದಾರರಿಂದ ಅಭೂತಪೂರ್ವ ಬೆಂಬಲ ಕಂಡು ಗೆಲುವಿನ ಅತಿಯಾದ ವಿಶ್ವಾಸದಿಂದ ಮತದಾನದ ಕೊನೆಯ ಗಳಿಗೆಯಲ್ಲಿ ಕೈ ಚೆಲ್ಲಿ ಕುಳಿತಿರುವುದು ಕಾಂಗ್ರೆಸ್ ಸೋಲಿಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇದಲ್ಲದೆ ವಿಜಯಪುರ ಜಿಲ್ಲೆಯ ಹೊಂದಾಣಿಕೆ ರಾಜಕಾರಣವೂ ಕಾಂಗ್ರೆಸ್ ಗೆಲುವಿಗೆ ಅಡ್ಡಗಾಲು ಆಗಿದೆ ಎನ್ನಲಾಗುತ್ತಿದೆ.
ತಲೆ ಕೆಳಗಾದ ಕಾಂಗ್ರೆಸ್ ಲೆಕ್ಕಾಚಾರ
ಗ್ಯಾರಂಟಿ ಬಲ, ಘಟಾನುಘಟಿ ಸಚಿವದ್ವಯರು, ನಾಲ್ವರು ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಶಾಸಕನಾಗಿ ಅಪಾರ ಅನುಭವವುಳ್ಳ ಅಭ್ಯರ್ಥಿ ರಾಜು ಆಲಗೂರ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಈ ಬಾರಿ ಬಿಜೆಪಿ ಭದ್ರಕೋಟೆಯನ್ನು ಬೇಧಿಸುವ ಉತ್ಸಾಹದಲ್ಲಿ ಕಾಂಗ್ರೆಸ್ ಇತ್ತು. ಬಿಜೆಪಿಯಲ್ಲಿ ಇತರ ಆಕಾಂಕ್ಷಿಗಳಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಬಂಡಾಯ ಬಿಸಿ ಜಿಗಜಿಣಗಿ ಗೆಲುವಿಗೆ ಅಡ್ಡಿಯಾಗಬಹುದು ಎಂಬ ಕಾಂಗ್ರೆಸ್ ಲೆಕ್ಕಾಚಾರ ಸಹ ಪ್ಲಸ್ ಫಾಯಿಂಟ್ ಆಗಲಿಲ್ಲ. ಸಚಿವ ಡಾ.ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ ಶತಾಯ ಗತಾಯ ಈ ಕ್ಷೇತ್ರ ಮತ್ತೆ ಕೈ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಸರಣಿ ಪ್ರಚಾರ ಸಭೆಗಳನ್ನು ನಡೆಸಿದ್ದರು. ಅಷ್ಟೇ ಏಕೆ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ವಿಜಯಪುರದಲ್ಲಿ ಭರ್ಜರಿ ಪ್ರಚಾರ ಸಭೆ ನಡೆಸಿದ್ದರು. ಈ ಎಲ್ಲ ಬಲದೊಂದಿಗೆ ಕಾಂಗ್ರೆಸ್ ಗೆಲುವಿನ ನಿರೀಕ್ಷೆಯನ್ನು ಅಧಿಕವಾಗಿಸಿಕೊಂಡಿತ್ತು.
ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿದ್ದರೂ ಸಹ ಕಾಂಗ್ರೆಸ್‍ಗೆ ಯಾವುದೂ ಪ್ಲಸ್ ಪಾಯಿಂಟ್ ಆಗಲಿಲ್ಲ, ಕೇವಲ ಓರ್ವ ಬಿಜೆಪಿ, ಓರ್ವ ಜೆಡಿಎಸ್ ಶಾಸಕರಿರುವ ಬಿಜೆಪಿಯೇ ಗೆಲುವಿನ ನಗೆ ಬೀರಿದೆ.
ಮೋದಿ ಹವಾ ಜಿಗಜಿಣಗಿಗೆ ಪ್ಲಸ್ ಪಾಯಿಂಟ್
ಹ್ಯಾಟ್ರಿಕ್ ಪ್ಲಸ್ ಸಾಧನೆಯ ಮೂಲಕ ಮತ್ತೆ ಚುನಾವಣೆಯಲ್ಲಿ ಬಿಜೆಪಿಯ ರಮೇಶ ಜಿಗಜಿಣಗಿ ಗೆಲವು ಸಾಧಿಸಿದ್ದಾರೆ. ಅಣ್ಣ, ಕಾಕಾ, ಬಾಬಾ, ಎನ್ನುತ್ತ ಮಾತನಾಡುವ ಜಿಗಜಿಣಗಿ ತಮ್ಮ ವಿರೋಧಿಗಳನ್ನು ಸಹ ದ್ವೇಷಿಸುವುದಿಲ್ಲ, ವೈರಿಗಳು ನನ್ನ ಮಿತ್ರರೇ ಎಂದು ಭಾವಿಸುವ ಮೂಲಕ ಪರೋಕ್ಷವಾಗಿ ವಿರೋಧಿಗಳನ್ನು ತಮ್ಮತ್ತ ಸೆಳೆದುಕೊಳ್ಳುವ ಗುಣ ಸಹ ಪ್ಲಸ್ ಪಾಯಿಂಟ್ ಆದಂತೆ ಕಾಣುತ್ತದೆ. ಇದೆಲ್ಲಕ್ಕೂ ಮಿಗಿಲಾದ ಮೋದಿ ಹವಾ ಜಿಗಜಿಣಗಿ ಕೈ ಹಿಡಿದಿದೆ. ಜಿಗಜಿಣಗಿ ಆವರೂ ಕೂಡಾ ಪ್ರಚಾರಕ್ಕೆ ಹೋದಲೆಲ್ಲಾ ನನ್ನ ಮುಖ ನೋಡದೆ ಪ್ರಧಾನಿ ನರೇಂದ್ರ ಮೋದಿ ಮುಖ ನೋಡಿ ಓಟ್ ಹಾಕಿ ಎಂದು ಹೇಳುತ್ತಿದ್ದರು. ಅದು ನಿಜಕ್ಕೂ ಜಿಗಜಿಣಗಿ ಅವರ ವಿಷಯದಲ್ಲಿ ವರ್ಕೌಟ್ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜಿಗಜಿಣಗಿ ಅವರೊಂದಿಗೆ ಭಿನ್ನಾಭಿಪ್ರಾಯ ಮರೆತು ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಬೇಕು ಎಂಬುವುದನ್ನು ಮನದಲ್ಲಿಟ್ಟುಕೊಂಡು ಜಿಗಜಿಣಗಿ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು. ಅಷ್ಟೇ ಅಲ್ಲದೆ, ಅವರ ಪುತ್ರ ರಾಮನಗೌಡರು ಸಹ ಜಿಗಜಿಣಗಿ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು. ಯತ್ನಾಳ ಹಾಗೂ ಅವರ ಪುತ್ರ ರಾಮನಗೌಡ ಅವರು ಜನರಲ್ಲಿ ಹಿಂದುತ್ವದ ಅಭಿಮಾನವನ್ನು ಜಾಗೃತಗೊಳಿಸಿ ವೋಟ್ ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.
ಬಿಜೆಪಿ ಕಾರ್ಯಕರ್ತರ ವ್ಯವಸ್ಥಿತವಾದ ಸಂಘಟನಾತ್ಮಕ ಫೀಲ್ಡ್ ವರ್ಕ್ ಕೂಡಾ ಬಿಜೆಪಿ ಗೆಲುವಿಗೆ ಹೆಚ್ಚಿನ ಕೆಲಸ ಮಾಡಿದೆ. ಕಳೆದ 10 ವರ್ಷಗಳಲ್ಲಿ ಜಿಗಜಿಣಗಿ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ 1 ಲಕ್ಷ ಕೋಟಿ ರೂ. ಅನುದಾನ ತಂದು, ಸೊಲ್ಲಾಪೂರ-ವಿಜಯಪುರ ಚತುಷ್ಪಥ ರಸ್ತೆ ಅಭಿವೃದ್ಧಿ, ಕೂಡಗಿ ಎನ್‍ಟಿಪಿಸಿ ಮೊದಲಾದ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದು ಗೆಲುವಿಗೆ ಸುಗಮ ದಾರಿ ಮಾಡಿಕೊಟ್ಟಿದೆ. ಕಾರ್ಯಕರ್ತರ ಹೆಗಲಿಗೆ ಗೆಲುವಿನ ಜವಾಬ್ದಾರಿ ವಹಿಸಿದ್ದು ಸಹ ಜಿಗಜಿಣಗಿ ಅವರ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಿದೆ.