ಒಗ್ಗಟ್ಟಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ
ಕೋಲಾರ, ಜೂ. ೫-ನಿರೀಕ್ಷಿಸಿದ್ದಂತೆ ಕೋಲಾರದಲ್ಲಿ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು ಗೆಲುವು ಸಾಧಿಸಿದ್ದಾರೆ, ಕೆಜಿಎಫ್ ಮತ್ತು ಚಿಂತಾಮಣಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಲೀಡ್ ಬರುತ್ತದೆ ಅಂದುಕೊಂಡಿದ್ದೆ ಅದರಂತೆ ಕೆಜಿಎಫ್ ಕ್ಷೇತ್ರದಲ್ಲಿ ಮಾತ್ರ ಲೀಡ್ ಬಂದಿರುವ ಕಾರಣ ಗೆಲುವಿನ ಅಂತರ ಕಡಿಮೆಯಾಗಿದೆ, ಗೆಲುವಿಗೆ ಒಂದೊಂದು ಮತವು ಮುಖ್ಯ, ಅಂದುಕೊಂಡಂತೆ ಗೆದ್ದು ತೋರಿಸಿದ್ದೇವೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ನಗರದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ದೇಶದಲ್ಲಿ ೧೫೦ ಕ್ಷೇತ್ರಗಳಲ್ಲಿ ೫ ರಿಂದ ೬ ಸಾವಿರ ಮತಗಳ ಅಂತರದಲ್ಲಿ ಇದ್ದೇವೆ, ಅದು ನಮ್ಮ ಗೆಲುವೇ ಆಗಿದೆ, ಏನೇ ಆಗಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿದ್ದಾರೆ,
ದಕ್ಷಿಣ ಭಾರತದಲ್ಲಿ ಎನ್‌ಡಿಎಗೆ ಹೆಚ್ಚು ಸ್ಥಾನಗಳು ಬಂದಿವೆ, ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡುಗಳಲ್ಲಿ ಎನ್‌ಡಿಎಗೆ ಉತ್ತಮ ಫಲಿತಾಂಶ ಬಂದಿದೆ, ಕೆಲವೊಂದು ರಾಜ್ಯಗಳಲ್ಲಿ ಕಡಿಮೆ ಸ್ಥಾನಗಳು ಬಂದಿವೆ ಅದಕ್ಕೆ ನಮ್ಮ ಅತಿನಿರೀಕ್ಷೆಯ ವಿಶ್ವಾಸವೇ ಕಾರಣವಾಗಿದೆ, ಇದರಿಂದ ಸ್ಪಲ್ಪ ಹಿನ್ನಡೆಯಾಗಿದೆ ಎಂದರು.
ಇಂಡಿಯಾ ಒಕ್ಕೂಟದಲ್ಲಿ ೩ ಪಕ್ಷಗಳು ಸೇರಿ ಆಲಿಬಾಬಾ ಕಳ್ಳರಂತೆ ಎನ್‌ಡಿಎಯನ್ನು ಅಧಿಕಾರಕ್ಕೆ ಬಾರದಿರುವಂತೆ ವಾಮ ಮಾರ್ಗಗಳಲ್ಲಿನ ಕುತಂತ್ರಗಳನ್ನು ನಡೆಸಿದರು ಅದರೆ ಫಲಿಸಲಿಲ್ಲ, ನರೇಂದ್ರ ಮೋದಿಯವರ ನಾಯಕತ್ವದಲ್ಲಿ ೩ನೇ ಬಾರಿಗೆ ಪ್ರಧಾನಿಯಾಗಿ ಹ್ಯಾಟ್ರಕ್ ಸಾಧನೆ ಮಾಡಲಿದ್ದಾರೆ ಎಂದರು.
ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಬಿಡಬಾರದೆಂದು ನಮ್ಮಲ್ಲಿ ಸಮುದಾಯಗಳನ್ನು ಒಡೆಯುವ ಕೆಲಸ ಬೇರೆ ದೇಶದ ಏಜೆಂಟರನ್ನು ಕರೆಯಿಸಿ ಹಲವಾರು ಕುತಂತ್ರಗಳನ್ನು ನಡೆಸಿದರು, ಆದರೆ ನಾವು ಅದನ್ನು ಗಮನಿಸಲಿಲ್ಲ, ನಮ್ಮಲ್ಲಿ ಹೆಚ್ಚು ನಿರೀಕ್ಷೆಯಿಟ್ಟುಕೊಂಡ ಕಾರಣ ನಮ್ಮ ಪಕ್ಷಕ್ಕೆ ಸ್ವಲ್ಪ ಹಿನ್ನಡೆಯಾಗಿದೆ ಎಂದರು.
ಇಡೀ ದೇಶದಲ್ಲಿ ಇಂಡಿಯಾ ಒಕ್ಕೂಟ ಮಾಡಿಕೊಂಡು ಒಂದು ಸಮುದಾಯವನ್ನು ಓಲೈಕೆ ಮಾಡಿಕೊಳ್ಳುವ ಕೆಲಸ ಮಾಡಿದರು, ನಾವು ಮೋದಿಯವರನ್ನು ಸೋಲಿಸುತ್ತೇವೆ ನಮಗೆ ಮತ ಹಾಕಿ ಎಂದು ಗಿಮಿಕ್ ರಾಜಕಾರಣ ಇಂಡಿಯಾ ಒಕ್ಕೂಟ ಮಾಡಿತು, ಅದರ ಜೊತೆಗೆ ಬೇರೆ ಬೇರೆ ಪಕ್ಷಗಳ ಸಂಪರ್ಕವನ್ನು ಸಾಧಿಸಿ ಬೆಂಬಲವನ್ನು ಪಡೆದುಕೊಂಡರು.
ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ, ಮತದಾರರು ಕೊಟ್ಟ ತೀರ್ಪನ್ನು ಉಪಯೋಗಿಸಿಕೊಂಡು ಕಾಂಗ್ರೆಸ್ ದುರಾಡಳಿತವನ್ನು ಕಿತ್ತೊಗೆಯಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.