ವಿಜೇತ ಅಭ್ಯರ್ಥಿ ಬೆಂಬಲಿಗರ ವಿಜಯೋತ್ಸವ
ಕೋಲಾರ, ಜೂ. ೫- ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ೨೦೨೪ರ ಚುನಾವಣೆಯ ಮತ ಎಣಿಕೆ ಕಾರ್ಯವು ಇಂದು ಜಿಲ್ಲಾಧಿಕಾರಿ ಅಕ್ರಂಪಾಷ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಎಂ. ಇವರ ನೇತ್ರತ್ವದಲ್ಲಿ ನಗರದ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಸ್ತು, ಬದ್ದತೆಯ ನಿರ್ವಾಹಣೆ ಹಾಗೂ ಸೂಕ್ತ ಬಂದೋಬಸ್ತ್ ಹಿನ್ನಲೆಯಲ್ಲಿ ಯಾವೂದೇ ಗಲಭೆ, ದೊಂಬಿಗಳು ಇಲ್ಲದೆ ಶಾಂತಿಯುತವಾಗಿ ಯಶಸ್ವಿಯಾಗಿ ನೇರವೇರಿತು.
ಮಂಗಳವಾರ ಬೆಳಿಗ್ಗೆ ೭ ಗಂಟೆಗೆ ಅಭ್ಯರ್ಥಿಗಳ ಮತ್ತು ಏಜೆಂಟ್‌ಗಳ ಸಮ್ಮುಖದಲ್ಲಿ ಅಂಚೆ ಮತದಾನ, ಸೇವಾ ಸಿಬ್ಬಂದಿಗಳ ಮತದಾನಗಳ ಮತಗಳ ಎಣಿಕೆ ಮಾಡಿದ ನಂತರ ೮ ಗಂಟೆಗೆ ಸ್ಟಾಂಗ್ ರೂಮ್‌ಗಳನ್ನು ತೆರೆದು ಇ.ವಿ.ಎಂ. ಮತಯಂತ್ರಗಳನ್ನು ೧೬ ಕೊಠಡಿಗಳ ೧೪ ಟೇಬಲ್‌ಗಳಿಗೆ ಹಂಚಿಕೆ ಮಾಡಲಾಯಿತು ಮೂರು ಹಂತದಲ್ಲಿ ಮತಗಳ ಎಣಿಕೆ ಮಾಡಲಾಯಿತು.
ಯಾವೂದೆ ರೀತಿ ಲೋಪ ದೋಷಗಳು ಇಲ್ಲದಂತೆ ಅಭ್ಯರ್ಥಿಗಳಿಗೆ ಮತ್ತು ಏಜೆಂಟ್‌ಗಳಿಗೆ ಯಾವೂದೇ ಗೊಂದಲಗಳಿಗೆ ಒಳಗಾಗದಂತೆ ಮತ ಎಣಿಕೆಯ ಅಧಿಕಾರಿಗಳು ನಿಯಮಾನುಸಾರವಾಗಿ ಮತಗಳನ್ನು ಎಣಿಕೆ ಮಾಡಿದರು ೨೧ ಸುತ್ತುಗಳಲ್ಲಿ ಮತಗಳ ಎಣಿಕೆಯ ಫಲಿತಾಂಶವನ್ನು ಘೋಷಿಸಲಾಯಿತು.
ಮತ ಎಣಿಕೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ,ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ, ಮತಗಟ್ಟೆಯ ಏಜೆಂಟ್‌ಗಳಿಗೆ, ಮಾದ್ಯಮದವರಿಗೆ ತಿಂಡಿ, ಕಾಫಿ.ನೀರು, ಊಟದ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಪ್ರತಿ ಕೊಠಡಿಗಳಿಗೆ ಸಿ.ಸಿ.ಕ್ಯಾಮೆರವನ್ನು ಅಳವಡಿಸಲಾಗಿತ್ತು, ಮಾದ್ಯಮದವರಿಗೆ ವಿಶೇಷವಾದ ಕೊಠಡಿ ಹಾಗೂ ಟಿ.ವಿಗಳ ವ್ಯವಸ್ಥೆಗಳೊಂದಿಗೆ ಮತ ಎಣಿಕೆಯ ಪ್ರತಿ ಸುತ್ತಿನ ಮಾಹಿತಿಯನ್ನು ನೀಡಲಾಗುತ್ತಿತ್ತು.
ಬಿಜೆಪಿ ಮತ್ತು ಜೆ.ಡಿ.ಎಸ್. ಪಕ್ಷದ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಮತ್ತು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಕೆ.ವಿ.ಗೌತಮ್ ಅವರ ನಡುವೆ ಜಿದ್ದಾಜಿದ್ದಿನ ಪೈಪೋಟಿಯ ಸ್ವರ್ಧೆ ಇತ್ತಾದರೂ ಪ್ರಾರಂಭದಿಂದಲೂ ಅಂತಿಮದವರೆಗೆ ಮಲ್ಲೇಶ್ ಬಾಬು ಅವರು ಕನಿಷ್ಠ ೨ ಸಾವಿರ ಮತಗಳ ಅಂತರದಿಂದ ಅಂತಿಮವಾಗಿ ೭೧,೩೮೮ ಮತಗಳ ಅಂತರದಲ್ಲಿ ವಿಜಯದ ಪತಾಕೆ ಹಾರಿಸಿದರು,
ಮಲ್ಲೇಶ್ ಬಾಬು ವಿಜೇತರಾದ ಮಾಹಿತಿ ಎನ್.ಡಿ.ಎ. ಬೆಂಬಲಿಗರಿಗೆ ತಲುಪುತಿದ್ದಂತೆ ಮತ ಎಣಿಕೆಯ ಹೊರಭಾಗದಲ್ಲಿ ನೆರದಿದ್ದ ಜೆ.ಡಿ.ಎಸ್. ಮತ್ತು ಬಿಜೆಪಿ ಬೆಂಬಲಿಗರು ಮಾಜಿ ಸಂಸದ ಎಸ್. ಮುನಿಸ್ವಾಮಿ ನೇತ್ರತ್ವದಲ್ಲಿ ಜಯಕಾರದ ಘೋಷಣೆಗಳನ್ನು ಕೊಗಿದರು, ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.