ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಕಲಬುರಗಿ,ಜೂ.4-ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಅಪರ ಜಿಲ್ಲಾ ಸತ್ರ (ವಿಶೇಷ ಪೋಕ್ಸೊ) ನ್ಯಾಯಾಲಯ 20 ವರ್ಷ ಜೈಲು ಮತ್ತು 20 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ಮೌಲಾಸಾಬ್ ಅಲಿಯಾಸ್ ಸನ್ನಿ ತಂದೆ ನಬಿಸಾಬ ಮುಲ್ಲಾ (75) ಶಿಕ್ಷೆಗೆ ಗುರಿಯಾದ ಆರೋಪಿ. ಆರೋಪಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಬಗ್ಗೆ 25-8-2023 ರಂದು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಳಂದ ಪಿಐ ಮಹಾದೇವ ಪಂಚಮುಖಿ ಪ್ರಕರಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸತ್ರ (ವಿಶೇಷ ಪೋಕ್ಸೊ) ನ್ಯಾಯಾಲಯ-ಎಫ್‍ಟಿಎಸ್‍ಸಿ-1 ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಕಾನೂನು ಪ್ರಾಧಿಕಾರದ ವತಿಯಿಂದ ನೊಂದ ಬಾಲಕಿಗೆ 7 ಲಕ್ಷ ಪರಿಹಾರವನ್ನು ತೀರ್ಪಿನ ದಿನಾಂದಿಂದ ಒಂದು ತಿಂಗಳ ನೀಡಬೇಕೆಂದು ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶಾಂತವೀರ ತುಪ್ಪದ ಅವರು ವಾದ ಮಂಡಿಸಿದ್ದರು.