ಬದ್ಧತೆ ಇಲ್ಲದಿದ್ದರೆ ಕಾರ್ಯ ಸಿದ್ಧಿಯಾಗದು : ಡಾ. ಸತೀಶ ಜಿಗಜಿನ್ನಿ
ವಿಜಯಪುರ,ಜೂ.4:ಕಲಿಕೆಯೆಂಬುದು ನಿರಂತರವಾದದು. ಅದಮ್ಯ ಆಸಕ್ತಿಯೇ ಕಲಿಕೆಗೆ ಪ್ರೇರಕಶಕ್ತಿ. ಕಾಲೇಜಿಗೆ ಬಂದ ಉದ್ದೇಶ ಮರೆತರೆ ಗುರಿ ಮುಟ್ಟಲಾಗದು. ಗುರಿ ಸಾಧಿಸಲು ಬೇಕಾದ ಜೀವನ ಬದ್ಧತೆ ಇಲ್ಲದಿದ್ದರೆ ಕಾರ್ಯ ಸಿದ್ಧಿಯಾಗದು ಎಂದು ಬಿ.ಎಲ್.ಡಿ.ಇ. ವೈದ್ಯಕೀಯ ವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಸತೀಶ ಜಿಗಜಿನ್ನಿ ಹೇಳಿದರು.
ವಿಜಯಪುರ ನಗರದ ಕೆ.ಎಸ್.ಆರ್.ಟಿ.ಸಿ. ಕಾಲನಿಯಲ್ಲಿರುವ ಎಕ್ಸಲಂಟ್ ಪ. ಪೂ. ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ 2024-25 ನೇ ಸಾಲಿನ ಪದವಿಪೂರ್ವ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ಕೇವಲ ಯೋಚನೆಗಳಿಂದ ಗುರಿಮುಟ್ಟಲಾಗದು. ಶ್ರದ್ಧೆ, ಸಮರ್ಪಣಾಭಾವ, ಧೃಡ ನಿರ್ಧಾರ, ಉತ್ಕಟವಾದ ಬಯಕೆ, ಸತತ ಪ್ರಯತ್ನದಿಂಧ ಯಶಸ್ಸು ಕಾಣಬಹುದು. ಉಳಿಪೆಟ್ಟು ತಿಂದಲ್ಲವೇ ಕಗ್ಗಲ್ಲು ಮೂರ್ತಿಯಾಗುವುದು. ಹಾಗೆಯೇ ವಿದ್ಯಾರ್ಥಿ ಜೀವನದಲ್ಲಿ ಕಷ್ಟ-ನಷ್ಟಗಳನ್ನು ತಾಳಿಕೊಂಡು ಸಹಿಷ್ಣುತಾ ಭಾವ ಹೊಂದಿ ಯಶಸ್ಸು ಸಾಧಿಸಬೇಕು ಎಂದರು.
ಯುವ ಬರಹಗಾರ ಮಂಜುನಾಥ ಜುನಗೊಂಡ ಮುಖ್ಯ ಅತಿಥಿಗಳಾಗಿ ಮಾತನಾಡಿ, ಜ್ಞಾನ ಜಗತ್ತಿನ ಯಾವುದೇ ಮೂಲಗಳಿಂದ ಬಂದರೂ ನಾವು ಸ್ವೀಕರಿಸಬೇಕು. ಹಲವು ಹಳ್ಳಗಳು ಸೇರಿ ಸಮುದ್ರವಾದಂತೆ ಶಿಕ್ಷಕರು, ಪಾಲಕರು, ಹಿರಿಯರು ಹೇಳುವ ಅನುಭವಾಮೃತದ ನುಡಿಗಳನ್ನು ಪಾಲಿಸಿ ನಾವೂ ಕೂಡ ವಿದ್ಯೆಯ ಪರ್ವತವಾಗಿ ದೇಶಕ್ಕೆ ಒಳ್ಳೆಯ ನಾಗರಿಕರಾಗಬೇಕು ನಕಾರಾತ್ಮಕತೆಯನ್ನು ಬಿಟ್ಟು ಧನಾತ್ಮಕತೆಯನ್ನು ಮೈಗೂಢಿಸಿಕೊಂಡು ಈ ಜಗತ್ತು ಇರುವುದು ನನ್ನ ಸಾಧನೆಗಾಗಿ ಎನ್ನುವ ಉತ್ಸಾಹ ಸದಾ ತುಂಬಿರಬೇಕು ಎಂದರು.
ಇನ್ನೋರ್ವ ಅತಿಥಿ ದ್ರೋಣ ಕರಿಯರ್ ಅಕಾಡೆಮಿಯ ಮುಖ್ಯಸ್ಥ ಕಲ್ಮೇಶ ಆಸಂಗಿ ಮಾತನಾಡಿ, ಒತ್ತಾಯದಿಂದ ಯಾವುದನ್ನು ಕಲಿಯಲಾಗದು. ಕಲಿಕೆಗೆ ಸ್ವಪ್ರೇರಣೆಯೇ ಮುಖ್ಯ. ಕಾಲೇಜು ಶಿಕ್ಷಣವೆಂದರೆ ಅಲ್ಲಿ ಹಲವಾರು ಆಯ್ಕೆಗಳಿರುತ್ತವೆ. ಉತ್ತಮರ ಒಡನಾಟ ಹೊಂದಿ ಕಲಿತ ಶಾಲೆಗೆ, ತಂದೆ-ತಾಯಿಯರಿಗೆ ಮತ್ತು ಬೆಳೆಸಿದ ಊರಿಗೆ ಹೂ-ತರುವ ಸಾಧನೆ ಮಾಡಬೇಕು.
ಅಧ್ಯಕ್ಷತೆಯನ್ನು ವಹಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷÀ ಬಸವರಾಜ ಕೌಲಗಿ ಅವರು ಮಾತನಾಡಿ, ಉತ್ತಮ ಆರಂಭವಾದರೆ ಅಧರ್À ಕಾರ್ಯ ಮುಗಿದಂತೆಯೆ. ಗುರಿಯ ಜೊತೆಗೆ ಗುರಿಮುಟ್ಟುವ ಮಾರ್ಗವೂ ಕೂಡಾ ಪ್ರಾಮಾಣಿಕತೆಯಿಂದ ಕೂಡಿರಬೇಕು. ಗುರಿಯಿಂದ ವಿಚಲಿತರಾಗುವಂತೆ ಪ್ರೇರೇಪಿಸಲು ಅನೇಕ ವಿಷಯಗಳಿದ್ದರೂ ಅವುಗಳನ್ನು ಮೀರಿ ನಮ್ಮ ನಡೆ ನೇರವಾಗಿ ಗುರಿಯ ಕಡೆ ಇರಬೇಕು. ಪಠ್ಯಕ್ರಮದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯೂ ಕೂಡ ಕ್ರಮಬದ್ಧವಾಗಿ ರೂಢಿಸಿಕೊಳ್ಳಬೇಕು ಎಂದರು.
ಸಾನ್ನಿಧÀ್ಯ ವಹಿಸಿದ ಅಥರ್ಗಾ ಗುರುದೇವಾಶ್ರಮದ ಪ. ಪೂ. ಈಶಪ್ರಸಾಧ ಮಹಾಸ್ವಾಮಿಜೀಯವರು ಶಾಲೆಯ ಶಿಕ್ಷಣದ ಜೊತೆಗೆ ಜೀವನಾನುಭವವೂ ಬಹುಮುಖ್ಯವಾದದ್ದು ಶ್ರದ್ಧೆ, ಧೈರ್ಯ, ಉತ್ಸಾಹ ಮತ್ತು ಪರಿಶ್ರಮ ನಮ್ಮದಾಗಿದ್ದರೆ, ಸಾಧನೆಯ ಶಿಖರ ಏರಬಹುದು. ನಮ್ಮ ಮೇಲೆ ನಮಗೆ ನಂಬಿಕೆ ಬರುವಂತೆ ಮಾಡುವುದೇ ಶಿಕ್ಷಣ. ದೇಹ ಬಲಿಷ್ಠವಾಗದೆ ಮನ ಗಟ್ಟಿಗೊಳ್ಳದು. ಓದಿನಲ್ಲಿ ಏಕಾಗ್ರತೆ ಭಂಗವಾದರೆ ಸಂಚಯಿಸಿಕೊಂಡ ಶಕ್ತಿ ಹಾಳಾಗುತ್ತದೆ. ಕಲಿಸುವ ಆಚಾರ್ಯರು ದೇವರಾದರೆ ಕಲಿಯುವ ಶಾಲೆಗಳೇ ದೇವಾಲಯ. ವಿದ್ಯಾರ್ಥಿಗಳ ಪಾಲಿನ ಕಾಮಧೇನುವಾದು ಎಕ್ಸಲಂಟ್ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳೆಲ್ಲವೂ ಸುದೈವಿಗಳೆಂದು ಆರ್ಶೀರ್ವಚನ ನೀಡಿದರು.
ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್. ಅವರು ಆಶಯ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಸೇತುಬಂಧ ವರ್ಗಗಳಲ್ಲಿ ಆಯೋಜಿಸಿದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕುಮಾರಿ ಶೃತಿ ವಾಲೀಕಾರ ಪ್ರಾರ್ಥಿಸಿದಳು. ಕನ್ನಡ ಉಪನ್ಯಾಸಕರ ಶರಣಗೌಡ ಪಾಟೀಲ ಸ್ವಾಗತಿಸಿದರು. ಎಂ.ಎಂ. ಮಲಘಾಣ ನಿರೂಪಿಸಿದರು. ರಮೇಶ ಬಾಗೇವಾಡಿ ವಂದಿಸಿದರು.