ಕವಲಗಿ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ
ವಿಜಯಪುರ,ಜೂ.4:ಕವಲಗಿಯ ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಶುಭಾರಂಭದ ದ್ಯೋತಕವಾಗಿ ಸರಸ್ವತಿ ಪೂಜೆ ಹಾಗೂ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಯಿತು.
ಎಲ್.ಕೆ.ಜಿ.ಗೆ ಸೇರಿದ ಪ್ರತಿಯೊಬ್ಬ ವಿದ್ಯಾರ್ಥಿಯ ಕೈ ಹಿಡಿದು ಶಿಕ್ಷಕ ವೃಂದ ಅಕ್ಷರಾಭ್ಯಾಸ ಮಾಡಿದ್ದು ಕಾರ್ಯಕ್ರಮದ ವೈಶಿಷ್ಟ್ಯವಾಗಿತ್ತು. ಸರಸ್ವತಿ ಸ್ತುತಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸರಸ್ವತಿ, ಸಿದ್ಧರಾಮೇಶ್ವರ ಹಾಗೂ ಸಂಗನಬಸವ ಸ್ವಾಮೀಜಿ ಭಾವಚಿತ್ರಗಳಿಗೆ ಪುಷ್ಪಾಂಜಲಿ ಅರ್ಪಿಸಲಾಯಿತು.
ಪ್ರಾಂಶುಪಾಲೆ ಶರ್ಮಿಳಾ ಹೇಮಂತ ಮಾತನಾಡಿ, ಈ ವರ್ಷದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಇನ್ನಷ್ಟು ಹುಮ್ಮಸ್ಸಿನಿಂದ ಕಾರ್ಯ ವಹಿಸಿ ಎಲ್ಲಾ ರಂಗದಲ್ಲೂ ಶಾಲೆ ಮತ್ತಷ್ಟು ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಹೇಮಂತ ಕೃಷ್ಣ ಅವರು, ಮಕ್ಕಳಿಗೆ ಹೊಸ ವಾತಾವರಣಕ್ಕೆ ಹೊಂದಲು ತುಸು ಸಮಯ ಬೇಕಾಗುತ್ತದೆ. ಶೈಕ್ಷಣಿಕ ಪ್ರಗತಿಯೊಂದಿಗೆ ಉತ್ತಮ ಸಂಸ್ಕಾರ, ಜೀವನ ಮೌಲ್ಯಗಳನ್ನೂ ಅಳವಡಿಸಿಕೊಳ್ಳಿ ಎಂದು ಹಿತವಚನ ನೀಡಿದರು.
ಅಂಗ್ಲ ಭಾಷೆ ಪ್ರಾಧ್ಯಾಪಕ ಗುರುದೇವ ಹೋಳಿ ಸ್ವಾಗತಿಸಿದರು. ಶಿಕ್ಷಕ ಮಧ್ವಪ್ರಸಾದ ಕುಲಕರ್ಣಿ ನಿರೂಪಿಸಿದರು. ಗಣಿತ ವಿಷಯ ಪ್ರಾಧ್ಯಾಪಕಿ ವೈಷ್ಣವಿ ಶೀಳಿನ ವಂದಿಸಿದರು.
ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ (ಯತ್ನಾಳ), ಚೇರ್‍ಮನ್ ಬಸಯ್ಯ ಹಿರೇಮಠ, ನಿರ್ದೇಶಕರು ಹಾಗೂ ಪದಾಧಿಕಾರಿಗಳು ಶುಭ ಹಾರೈಸಿದರು.