ತೊರವೆಯ ನರಸಿಂಹ ದೇವಸ್ಥಾನದಲ್ಲಿ `ಶ್ರೀರಾಮ ಪಟ್ಟಾಭಿಷೇಕಂ’ ಕಾವ್ಯವಾಚನ ವ್ಯಾಖ್ಯಾನ
ವಿಜಯಪುರ,ಜೂ.4:ಸಮೀಪದ ತೊರವೆಯ ಶ್ರೀ ನರಸಿಂಹ ದೇವಸ್ಥಾನದಲ್ಲಿ ತೊರವೆ ರಾಮಾಯಣ ಮಹಾಕಾವ್ಯದ ಯುದ್ಧಕಾಂಡದ ಶ್ರೀರಾಮ ಪಟ್ಟಾಭಿಷೇಕಂ' ಪ್ರಸಂಗದ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು. ಶ್ರೀ ಜನಕಜಾ ರಮಣ, ವಿಮಲ ಸರೋಜ ಸಂಭವ ಜನಕ……….. ಸುರಭೂಜ ತೊರವೆಯ ರಾಯ ನರಹರಿ ಪಾಲಿಸುಗೆ ಜಗವ’ ಎಂಬ ಮಂಗಲಾಚರಣ ಪದ್ಯದೊಂದಿಗೆ ಗಮಕಿಗಳಾದ ಪುಷ್ಪಾ ಕುಲಕರ್ಣಿ ಹಾಗೂ ಭೂದೇವಿ ಕುಲಕರ್ಣಿ ಇವರುಗಳು ಗಮಕ ವಾಚನವನ್ನು ಮಾಡಿದರು.
14 ವರುಷಗಳ ವನವಾಸದಿಂದ ಅಯೋಧ್ಯೆಗೆ ಮರಳಿ ಬಂದ ರಾಮನು ತನ್ನ ತಾಯಂದಿರು ಹಾಗೂ ತಮ್ಮಂದಿರುಗಳನ್ನು ಕಂಡು ಪಡುವ ಆನಂದ, ಅಣ್ಣನನ್ನು ಅಪ್ಪಿಕೊಂಡು ಕಣ್ಣೀರಿಡುವ ಭರತ ಇವರುಗಳೆಲ್ಲ ಪ್ರಾಚೀನ ಭಾರತೀಯ ಸಂಸ್ಕøತಿಯ ಆದರ್ಶ ಪಾತ್ರಗಳಾಗಿ ಮೂಡಿ ನಿಂತರು. ಶ್ರೀರಾಮನ ಪಟ್ಟಾಭಿಷೇಕವು ಸುಗ್ರೀವ, ವಿಭೀಷಣ, ಕಪಿಸೈನ್ಯಗಳ ಉತ್ಸಾಹದಿಂದ ವೈಭವಪೂರ್ಣವಾಗಿ ನೆರವೇರಿತು. ಶ್ರೀರಾಮನು ವಿಭೀಷಣನಿಗೆ ಹಾಗೂ ಸುಗ್ರೀವಾದಿ ಕಪಿಗಳಿಗೆ ಏರ್ಪಡಿಸಿದ ಭೋಜನಕೂಟ ಆತ್ಮೀಯವಾಗಿತ್ತು. ಆ ಭೋಜನಕೂಟದಲ್ಲಿ ಶ್ರೀರಾಮನು ಹನುಮಂತನಿಗೆ ಬೇರೆ ತಟ್ಟೆ ಹಾಕದೇ ತನ್ನ ತಟ್ಟೆಯಲ್ಲೇ ಊಟಕ್ಕೆ ಕೂಡಿಸಿಕೊಂಡಿದ್ದು, ಹನುಮಂತನ ರಾಮ ಭಕ್ತಿಯನ್ನು ಪ್ರದರ್ಶಿಸಿತು. ಹನುಮಂತನು ಮಾಡಿದ ಸಹಾಯವನ್ನು ಶ್ರೀರಾಮನು ಲಕ್ಷ್ಮಣನಿಗೆ ವಿವರಿಸಿದನು. ಹನುಮಂತನು ನಾವು ಮೂರ್ಛೆ ಹೋದಾಗ ಸಂಜೀವಿನಿ ತಂದು ಬದುಕಿಸಿದನು. ಸತ್ತ ಕಪಿಸೈನ್ಯವನ್ನು ಬದುಕಿಸಿದನು. ಸೀತೆಗೆ ಉಂಗುರ ಕೊಟ್ಟು ಬಂದನು. ಲಂಕೆಗೆ ಬೆಂಕಿ ಇಟ್ಟನು. ಅಶೋಕ ವನವನ್ನು ಕಿತ್ತಿ ಹಾಕಿದನು ಹಾಗೂ ಅನೇಕ ರಾಕ್ಷಸರನ್ನು ಕೊಂದನು. ಹೀಗೆ ಕೊಟ್ಟ ಕೆಲಸವನ್ನು ಆಲಸ್ಯ ಮಾಡದೇ ಮಾಡುವನು ಎಂದರೆ ಹನುಮಂತನು ಒಬ್ಬನೇ' ಎಂದು ರಾಮನು ವರ್ಣಿಸಿದನು. ಸಂತೋಷದಿಂದ ಶ್ರೀರಾಮನು ಹನುಮಂತನಿಗೆಜಗತ್ತಿಗೆ ಗುರುವಾಗು’ ಎಂದು ವರವಿತ್ತನು. ಹೀಗೆ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದ ವ್ಯಾಖ್ಯಾನವನ್ನು ವ್ಯಾಖ್ಯಾನಕಾರ ಕಲ್ಯಾಣರಾವ ದೇಶಪಾಂಡೆ ಅವರು ವಿಸ್ತರಿಸಿ ಹೇಳಿದರು.
ಗಮಕದ ಕೊನೆಗೆ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಸಂತೋಷ ಕುಲಕರ್ಣಿ ಅವರು ಗಮಕಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಮಾರಂಭದಲ್ಲಿ ಹಿರಿಯ ಗಮಕಿ ಶಾಂತಾ ಕೌತಾಳ, ಮಂಜುಳಾ ಪಾಟೀಲ, ಪದ್ಮಾ ಕುಲಕರ್ಣಿ, ಪ್ರಮೀಳಾ ದೇಶಪಾಂಡೆ, ವಿಮಲಾ ಕುಲಕರ್ಣಿ, ಗೀತಾ ಹುದ್ದಾರ, ಗೋವಿಂದ ಡಂಬಳ, ಸಂಧ್ಯಾ ಕುಲಕರ್ಣಿ, ದೀಪಾ ಜಹಾಗೀರದಾರ, ಉಲ್ಲಾಸ ಪಾಟೀಲ, ರಮಾ ಪಾಟೀಲ, ಅನಂತ ದೇಶಪಾಂಡೆ, ಆಕಾಶ ದೇಶಪಾಂಡೆ, ಪವನ ದೇಶಪಾಂಡೆ, ಅಶ್ವಿನಿ, ಪ್ರತೀಕ್ಷಾ ಅವರು ಭಾಗವಹಿಸಿದ್ದರು.