ಚುನಾವಣೆ ಅವ್ಯವಸ್ಥೆ: ಜಲಾದೆ ಬೇಸರ
ಬೀದರ್:ಜೂ.4: ವಿಧಾನ ಪರಿಷತ್ತಿನ ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿತ್ತು ಎಂದು ಚುನಾವಣೆಯ ಬಿಜೆಪಿಯ ಬೀದರ್ ವಿಧಾನಸಭಾ ಕ್ಷೇತ್ರದ ಸಂಚಾಲಕ ರೇವಣಸಿದ್ದಪ್ಪ ಜಲಾದೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಆಡಳಿತವು ಚುನಾವಣೆಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದೆ. ಅವ್ಯವಸ್ಥೆಯ ಮಧ್ಯೆಯೇ ಪದವೀಧರ ಮತದಾರರು ಮತ ಹಕ್ಕು ಚಲಾಯಿಸುವಂತಾಯಿತು. ಅನೇಕರು ಹಿಡಿಶಾಪ ಹಾಕಿದರು ಎಂದು ಹೇಳಿದ್ದಾರೆ.
ನಗರದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಒಂದೇ ಆವರಣದಲ್ಲಿ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು. ಮತದಾರರು ಸಾಲಿನಲ್ಲಿ ನಿಲ್ಲಬೇಕೆಂದರೂ ಜಾಗ ಇರಲಿಲ್ಲ. ಮತಗಟ್ಟೆಯಲ್ಲಿ ಬೆಳಕಿನ ವ್ಯವಸ್ಥೆ ಸರಿಯಾಗಿ ಮಾಡಿರಲಿಲ್ಲ. ಮುಂಭಾಗದಲ್ಲಿ ಸ್ವಚ್ಛತಾ ಕಾರ್ಯವನ್ನೂ ಕೈಗೊಂಡಿರಲಿಲ್ಲ ಎಂದು ದೂರಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ಮೂರು ಹಾಗೂ ಗುರು ಭವನದ ಒಂದು ಸೇರಿ ಒಂದೇ ರಸ್ತೆಯಲ್ಲಿ ನಾಲ್ಕು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಮಾರ್ಗದಲ್ಲಿ ಸರ್ಕಾರಿ ಕಚೇರಿಗಳೂ ಇದ್ದ ಕಾರಣ ಸಂಚಾರ ದಟ್ಟಣೆ ಉಂಟಾಗಿತ್ತು. ಓಡಾಟ ಹಾಗೂ ವಾಹನ ನಿಲುಗಡೆಗೆ ಮತದಾರರು ತೀವ್ರ ತೊಂದರೆ ಅನುಭವಿಸಿದರು ಎಂದು ಹೇಳಿದ್ದಾರೆ.
ಒಂದು ಕಟ್ಟಡದಲ್ಲಿ ಒಂದು ಮತಗಟ್ಟೆ ಸ್ಥಾಪಿಸಿದರೆ ಸಾಕಿತ್ತು. ಆದರೆ, ಮೂರು ಮತಗಟ್ಟೆಗಳನ್ನು ಒಂದೇ ಕಡೆ ಸ್ಥಾಪಿಸುವ ಅನಿವಾರ್ಯತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಇನ್ನು ಮತದಾರರ ಪಟ್ಟಿಯೂ ಅನೇಕ ದೋಷಗಳನ್ನು ಒಳಗೊಂಡಿತ್ತು. ಹೆಸರುಗಳಲ್ಲಿ ತಪ್ಪುಗಳು ಆಗಿದ್ದವು. ಒಬ್ಬರ ಹೆಸರು ನಾಲ್ಕು ಕಡೆಗಳಲ್ಲಿ ಕಂಡು ಬಂದಿತ್ತು ಎಂದು ಆರೋಪಿಸಿದ್ದಾರೆ.
ಚುನಾವಣೆ ಅವ್ಯವಸ್ಥೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.