ಬುದ್ಧ ಶಾಂತಿಯ ಪ್ರತೀಕವಾದರೆ, ನಾಲ್ವಡಿ ಕೃಷ್ಣರಾಜ ಒಡೆಯರು ಅಭಿವೃದ್ಧಿಯ ಪ್ರತೀಕ
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ4: ಬುದ್ಧನೆಂದರೆ ಜಾಗೃತಿ, ಎಚ್ಚರ, ಪ್ರಜ್ಞೆ ಮತ್ತು ಜ್ಞಾನದ ಬೆಳಕು. ಬುದ್ಧನನ್ನು ಪ್ರತಿಮೆಗಳಲ್ಲಿ, ವಿಹಾರಗಳಲ್ಲಿ, ಪುಸ್ತಕಗಳಲ್ಲಿ ಹುಡುಕಿದರೆ ಸಿಗುವುದಿಲ್ಲ. ನಮ್ಮೊಳಗಿನ ಚಿಂತನೆಗಳಲ್ಲಿ, ಆಲೋಚನೆಯಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆ ಮೂಡಿದಾಗ ಬುದ್ಧನ ದರ್ಶನವಾಗುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಮೋಹನ್ ಕೃಷ್ಣ ರೈ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಸೋಮವಾರ ದಲಿತ ಸಂಸ್ಕøತಿ ಅಧ್ಯಯನ ಪೀಠದ ವತಿಯಿಂದ ಆಯೋಜಿಸಲಾಗಿದ್ದ 2568ನೇ ಭಗವಾನ್ ಗೌತಮ ಬುದ್ಧ ಹಾಗೂ 140ನೇ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿ ಕಾರ್ಯಕ್ರಮವನ್ನು ಗೌತಮ ಬುದ್ಧ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಮಾನ್ಯ ಕುಲಪತಿಯವರಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಬುದ್ಧ, ಬೌದ್ಧ ಧರ್ಮ ಹಾಗೂ ಪ್ರಸ್ತುತತೆ ವಿಷಯದ ಕುರಿತು ವಿಶೇಷ ಉಪನ್ಯಾಸಕ್ಕೆ ಚಾಲನೆ ನೀಡಿ ಮಾತನಾಡುತ್ತ ಬುದ್ಧನ ಹುಟ್ಟು ಮತ್ತು ಸಾವಿಗೆ ಕಾಲಘಟ್ಟಗಳು ಇರಬಹುದು. ಆದರೆ ಬುದ್ಧನ ಚಿಂತನೆಗಳು ಮತ್ತು ಆಲೋಚನೆಗಳಿಗೆ ಯಾವುದೇ ರೀತಿಯ ಕಾಲಘಟ್ಟಗಳಿಲ್ಲ. ಪ್ರಜಾಪ್ರಭುತ್ವದಲ್ಲಿ ರಾಜಪ್ರಭುತ್ವದ ಲಕ್ಷಣಗಳು, ಊಳಿಗಮಾನ್ಯ ಪದ್ಧತಿ, ಬಂಡವಾಳಶಾಹಿ ಪದ್ಧತಿ, ರಾಜ್ಯ ಭಾಷೆಯ ಮುಂದೆ ಆಡು ಭಾಷೆಗಳು ಪ್ರಾಮುಖ್ಯ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಬುದ್ಧನ ಆಲೋಚನ ದೃಷ್ಟಿ, ಜೀವನ ಶೈಲಿ ಹಾಗೂ ಚಿಂತನೆಗಳು ಪ್ರಸ್ತುತತೆಯನ್ನು ಪಡೆಯುತ್ತವೆ. ಇಂದು ಭಾರತವನ್ನು ಬೆಸೆಯುವ ಕೊಂಡಿಗಳು ದೂರವಾಗಿ ಭಾರತವನ್ನು ಒಡೆಯುವ ಕೊಂಡಿಗಳು ಹತ್ತಿರವಾಗುತ್ತಿರುವುದು ದುರಂತದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚಿಂತನೆಗಳ ಪ್ರಸ್ತುತತೆ ವಿಷಯದ ಕುರಿತು ಉಪನ್ಯಾಸ ನೀಡುತ್ತ ನಾಲ್ವಡಿ ಕೃಷ್ಣರಾಜ ಒಡೆಯರು ಸಂವಿಧಾನದ ಆಶಯಗಳನ್ನು 1910ರಲ್ಲೇ ಒಂದಷ್ಟು ಜಾರಿಗೆ ತರುವ ಮೂಲಕ ಅಭಿವೃದ್ಧಿಯ ಹರಿಕಾರರಾಗಿದ್ದರು. ಕೃಷ್ಣರಾಜ ಸಾಗರ ಆಣೆಕಟ್ಟು, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರು ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್ತು ಹೀಗೆ ಹಲವಾರು ಕಾರ್ಯಗಳನ್ನು ಮಾಡುವುದರ ಮೂಲಕ ಮೈಸೂರನ್ನು ಮಾದರಿ ರಾಜ್ಯವನ್ನಾಗಿ ರೂಪಿಸದ್ದರು. ಮಹಾತ್ಮ ಗಾಂಧೀಜಿಯವರು ಇವರ ಕಾರ್ಯಗಳನ್ನು ಮೆಚ್ಚಿ ಇವರನ್ನು ರಾಜಶ್ರೀ ಮತ್ತು ಮೈಸೂರು ರಾಜ್ಯವನ್ನು ಮಾದರಿ ರಾಜ್ಯ ಎಂದು ಕರೆದಿರುವುದು ನಾಲ್ವಡಿ ಅವರ ಸಾಧನೆಗೆ ಹಿಡಿದ ಕನ್ನಡಿ ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಡಿ.ವಿ. ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಕಾಲದಿಂದ ಕಾಲಕ್ಕೆ ಅನೇಕ ಸಮಾಜ ಸುಧಾರಕರು ಮತ್ತು ಮಹಾನುಭಾವರು ಜನ್ಮತಾಳಿ ಬಂದರೂ, ನಾವು ಇನ್ನೂ ಬದಲಾಗದೆ ಇರೋದೇ ಒಂದು ದೊಡ್ಡ ದುರಂತ. ಭಗವಾನ್ ಬುದ್ಧ ತನ್ನ ಚಿಂತನೆಗಳೂ ಮತ್ತೂ ಆಚರಣೆಗಳ ಮೂಲಕ ಜಗತ್ತನ್ನು ಬದಲಾಯಿಸುವುದಕ್ಕೆ ಪ್ರಯತ್ನಪಟ್ಟರು. ನಾಲ್ವಡಿ ಕೃಷ್ಣರಾಜ ಒಡೆಯರು ಆರ್ಥಿಕತೆ ಮತ್ತು ರಾಜಕೀಯದ ಮೂಲಕ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದರು.
ಚರಿತ್ರೆ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಹಾಗೂ ದಲಿತ ಅಧ್ಯಯನ ಪೀಠದ ಸಂಚಾಲಕರಾದ ಡಾ.ಚಿನ್ನಸ್ವಾಮಿ ಸೋಸಲೆ ಅವರು ಸ್ವಾಗತ ಮಾಡಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿ ಮಣಿಕಂಠ ಅಂಗಳ ನಿರೂಪಿಸಿದರು. ಶ್ರೇಯಸ್ ವಂದಿಸಿದರು.