ಅಕ್ಕ ಅನ್ನಪೂರ್ಣತಾಯಿಗೆ ಭಾವಪೂರ್ಣ ನುಡಿ ನಮನ
ಬೀದರ್: ಜೂ.4:ಇಲ್ಲಿಯ ಬಸವಗಿರಿಯಲ್ಲಿ ಲಿಂಗೈಕ್ಯ ಡಾ. ಅಕ್ಕ ಅನ್ನಪೂರ್ಣತಾಯಿ ಅವರಿಗೆ ನಾಡಿನ ಮಠಾಧೀಶರು, ರಾಜಕೀಯ ಧುರೀಣರು, ಗಣ್ಯರು ಹಾಗೂ ಬಸವಾನುಯಾಯಿಗಳು ಭಾನುವಾರ ಭಾವಪೂರ್ಣ ನುಡಿ ನಮನ ಸಲ್ಲಿಸಿದರು.
ನುಡಿ ನಮನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಅವರು ನಾಡಿನಾದ್ಯಂತ ಬಸವ ತತ್ವದ ಕಂಪು ಹರಡಿಸಿದ್ದರು. ಲೇಸೆನಿಸಿಕೊಂಡು ಬದುಕಿದ್ದರು ಎಂದು ಬಣ್ಣಿಸಿದರು.
ಅಕ್ಕ ಅವರು ಲಿಂಗೈಕ್ಯರಾಗಿರುವುದರಿಂದ ಯಾರೂ ನಿರಾಶರಾಗಬಾರದು. ಬಸವ ಧರ್ಮ ನಿರಾಶಾವಾದಿ ಧರ್ಮವಲ್ಲ. ಆಶಾವಾದಿ ಧರ್ಮ. ಹಿಂದೆ, ಇಂದು, ಮುಂದೆಯೂ ಇರುವ ಬಸವ ತತ್ವವೇ ಶಾಶ್ವತ. ನಾವ್ಯಾರೂ ಕಾಯಂ ಅಲ್ಲ. ಅಕ್ಕನವರು ಆಚರಿಸಿ ಪ್ರವಚನ ಮೂಲಕ ಸಾರಿದ ವಚನದ ಸಾರವನ್ನು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ನುಡಿ ನಮನ ಎಂದು ಮಾರ್ಮಿಕವಾಗಿ ಹೇಳಿದರು.
ಡಾ. ಗಂಗಾಂಬಿಕೆ ಅಕ್ಕ ಮತ್ತು ಪ್ರಭುದೇವ ಸ್ವಾಮೀಜಿ ಅವರು ಅಕ್ಕನವರ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಅಕ್ಕ ಅವರ ಕಾರ್ಯಗಳನ್ನು ಜನಮನದಲ್ಲಿ ಸ್ಥಾಯಿಗೊಳಿಸಲು ಸೂಕ್ತ ಸ್ಮಾರಕ ನಿರ್ಮಿಸಬೇಕು. ಪ್ರಭುದೇವ ಸ್ವಾಮೀಜಿ ಅಂತರಂಗದ ವಿಕಾಸಕ್ಕಾಗಿ ಅನುಷ್ಠಾನ ಕೈಗೊಳ್ಳಬೇಕು ಎಂದು ಕಿವಿಮತು ಹೇಳಿದರು.
ಸಾನಿಧ್ಯ ವಹಿಸಿದ್ದ ಹುಲಸೂರಿನ ಡಾ. ಶಿವಾನಂದ ಸ್ವಾಮೀಜಿ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಅವರು ಎಲ್ಲರಿಗೂ ತಾಯಿ ಪ್ರೀತಿ ನೀಡುತ್ತಿದ್ದರು. ವಚನ ವಿಜಯೋತ್ಸವದಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ವಿವಿಧ ಕ್ಷೇತ್ರಗಳ ಸಾಧಕರನ್ನು ಆಹ್ವಾನಿಸಿ ಪ್ರಶಸ್ತಿ ನೀಡುತ್ತಿದ್ದರು ಎಂದು ಸ್ಮರಿಸಿದರು.
ಅಕ್ಕನವರ ಕೊನೆಯ ದಿನಗಳಲ್ಲಿ ಪ್ರಭುದೇವರು ಮಗನಂತೆ ಸೇವೆ ಮಾಡಿದ್ದಾರೆ. ಸನ್ಯಾಸಿಗಳಿಗೆ ಹೀಗೆ ಸೇವೆ ಮಾಡುವವರು ಯಾರು ಎಂದು ಭಾವುಕರಾದರು.
ಅಕ್ಕನವರ ಆಶಯಗಳನ್ನು ಪೂರೈಸುವುದು ನಮ್ಮೆಲ್ಲರ ಕರ್ತವ್ಯ. ಅಕ್ಕ-ಅಣ್ಣ ಉಭಯರು ಸೇರಿ ವಚನ ವಿಜಯೋತ್ಸವದ ವೈಭವ ಮತ್ತೆ ಮರುಕಳಿಸುವಂತೆ ಮಾಡಬೇಕು ಎಂದು ಕಳಕಳಿಯಿಂದ ನುಡಿದರು.
ಬೆಂಗಳೂರಿನ ಚನ್ನಬಸವಾನಂದ ಸ್ವಾಮೀಜಿ, ಡಾ. ಗಂಗಾಂಬಿಕೆ ಅಕ್ಕ, ಪ್ರಭುದೇವ ಸ್ವಾಮೀಜಿ, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬುವಾಲಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಉದ್ಯಮಿ ಜಯರಾಜ ಖಂಡ್ರೆ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಬಸವರಾಜ ಧನ್ನೂರ, ಜಿ.ಪಂ. ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಭಾವಪೂರ್ಣ ನುಡಿ ನಮನ ಸಲ್ಲಿಸಿದರು. ಅಕ್ಕನವರ ಕಾರ್ಯಗಳನ್ನು ನೆನೆಯುತ್ತ, ಮುಂದಿನ ಜವಾಬ್ದಾರಿಗಳನ್ನು ಸಹ ನೆನಪಿಸಿದರು.
ಪ್ರಜ್ವಲ್ ಪತಂಗೆ ನುಡಿ ಕಾಣಿಕೆ ಸಲ್ಲಿಸಿದರೆ, ಶೋಭಾ ಕಂಟೆ ತಾವೇ ರಚಿಸಿದ ಅಕ್ಕನ ಕವಿತೆಯನ್ನು ಹಾಡಿದರು. ಪ್ರಾರಂಭದಲ್ಲಿ ಅಕ್ಕ ಅನ್ನಪೂರ್ಣತಾಯಿ ಅವರ ಸಮಾಧಿ ಹಾಗೂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಅಕ್ಕನವರಿಗೆ ಪ್ರೀಯವಾಗಿದ್ದ ಅಕ್ಕನ ಯೋಗಾಂಗ ತ್ರೀವಿಧಿಗಳನ್ನು ಸಾಮೂಹಿಕವಾಗಿ ಪಠಣ ಮಾಡಲಾಯಿತು.
ಧಾರವಾಡದ ಶಾಂತಾ ಮಾತಾಜಿ, ಬಸವಕಲ್ಯಾಣದ ಗಾಯತ್ರಿ ತಾಯಿ, ಸತ್ಯಕ್ಕ, ಅಜಗಣ್ಣ ತಂದೆ, ಪರುಷಕಟ್ಟೆ ಚನ್ನಬಸವಣ್ಣ ವಿರೂಪಾಕ್ಷ ಗಾದಗಿ, ಪ್ರಭುರಾವ್ ವಸ್ಮತೆ, ಆರ್.ಕೆ. ಪಾಟೀಲ, ರಮೇಶ ಮಠಪತಿ ಸಮ್ಮುಖ ವಹಿಸಿದ್ದರು.
ಅಶ್ವಿನಿ ರಾಜಕುಮಾರ ವಚನ ಗಾಯನ, ಕದಳಿಶ್ರೀ ನೃತ್ಯ ಪ್ರದರ್ಶಿಸಿದರು. ಲಿಂಗಾಯತ ಸೇವಾ ದಳದ ಅಭಿಷೇಕ ಸ್ವಾಗತಿಸಿದರು. ರಾಜಕುಮಾರ ಪಾಟೀಲ ನಿರೂಪಿಸಿದರು. ಲಲಿತಾ ಗುರುರಾಜ ಮೋಳಕೇರೆ ಪ್ರಸಾದ ದಾಸೋಹಗೈದರು.
ಪ್ರಭುದೇವ ಸ್ವಾಮೀಜಿಯಿಂದ 21 ದಿನ ಅನುಷ್ಠಾನ
ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಭಾನುವಾರ ಸಂಜೆಯಿಂದ 21 ದಿನಗಳ ಅನುಷ್ಠಾನ ಆರಂಭಿಸಿದರು.
ಅಂತರಂಗದ ವಿಕಾಸಕ್ಕಾಗಿ ಅನುಷ್ಠಾನ ಕೈಗೊಳ್ಳಲಾಗುತ್ತಿದೆ. ಶಿವಯೋಗ ಸಾಧನೆ, ವಚನಗಳ ಅಧ್ಯಯನ, ಶೂನ್ಯ ಸಂಪಾದನೆ ಗ್ರಂಥಗಳು, ಇತರ ಧರ್ಮ ಶಾಸ್ತ್ರಗಳನ್ನು ಓದುವ ಮೂಲಕ ಅರಿವು ವಿಕಾಸಗೊಳಿಸಿಕೊಳ್ಳುವುದು ಅನುಷ್ಠಾನದ ಉದ್ದೇಶವಾಗಿದೆ ಎಂದು ತಿಳಿಸಿದರು.
ಭಾಲ್ಕಿ ಶ್ರೀ ಹಾಗೂ ಹುಲಸೂರ ಶ್ರೀ ಮಾರ್ಗದರ್ಶನದಲ್ಲಿ ಅನುಷ್ಠಾನ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.