ಸೆಸ್ಕಾಂ ನಿರ್ಲಕ್ಷ್ಯದಿಂದ ತುಂಡಾಗಿ ಬೀಳುತ್ತಿವೆ ವಿದ್ಯುತ್ ತಂತಿಗಳು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.04: ಸೆಸ್ಕಾಂ ನಿರ್ಲಕ್ಷ್ಯದಿಂದ ತಾಲೂಕಿನಾದ್ಯಂತ ಅಲ್ಲಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬೀಳುತ್ತಿದ್ದು ರೈತರ ಬದುಕಿಗೆ ವಿದ್ಯುತ್ ತಂತಿಗಳು ಯಮಪಾಶಗಳಾಗುತ್ತಿವೆ.
ತೀವ್ರ ಬರಗಾಲದ ನಂತರ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ ರೈತರು ಕೂಡಾ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡುತ್ತಿದ್ದಾರೆ ಆದರೆ ಪಂಪ್‍ಸೆಟ್ ಆಧಾರಿತ ರೈತರ ಕೃಷಿ ಚಟುವಟಿಕೆಗಳಿಗೆ ಮೂಲಾದಾರವಾದ ವಿದ್ಯುತ್ ಲೈನ್‍ಗಳು ತುಂಡಾಗಿ ಬೀಳುವ ಮೂಲಕ ರೈತ ಕುಟುಂಬಗಳ ಜೀವ ತೆಗೆಯುತ್ತಿವೆ. ವಿದ್ಯುತ್ ಇಲಾಖೆ ಮತ್ತು ರೈತರ ನಡುವೆ ಸಂಪರ್ಕ ಕೊಂಡಿಯಂತಿದ್ದ ವಿದ್ಯುತ್ ಲೈನ್ ಗಳು ಇತ್ತೀಚೆಗೆ ಯಮಪಾಶವಾಗಿ ರೈತರು ಮತ್ತು ಯಮಪುರಿಗೆ ಸಂಪರ್ಕ ಸೇತುವೆಗಳಾಗಿ ಬದಲಾಗುತ್ತಿರುವುದು ದುಖ:ಕರ ಸಂಗತಿಯಾಗಿದೆ.
ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಇತ್ತೀಚೆಗೆ ರೈತ ಮಹಿಳೆಯೊಬ್ಬರು ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಸಾವನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ತಾಲ್ಲೂಕಿನ ಬೆಡದಹಳ್ಳಿ ಗ್ರಾಮದ ಶಿವೇಗೌಡ ಎನ್ನುವವರು ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ತಂತಿ ತುಳಿದು ಸಾವನಪ್ಪಿದರು.
ಈ ಹಿಂದೆ ತುಂಡಾದ ವಿದ್ಯುತ್ ತಂತಿ ತುಳಿದು ದನಕರುಗಳೂ ಸಾವನಪ್ಪಿದ ಹಲವು ಘಟನೆಗಳು ತಾಲೂಕಿನಲ್ಲಿ ವರದಿಯಾಗಿವೆ. ವಿದ್ಯುತ್ ತಂತಿ ತುಳಿದು ರೈತರ ಸಾವಿನ ಘಟನೆಗಳ ನಡುವೆ ಪುರಸಭಾ ವ್ಯಾಪ್ತಿಯ ಹೊಸಹೊಳಲಿನ 21 ವಾರ್ಡಿನ ಜನ ವಸತಿ ಪ್ರದೇಶದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸುವಲ್ಲಿಯೂ ಸೆಸ್ಕಾಂ ಮಂದಗತಿಯಲ್ಲಿ ಕೆಲಸ ಮಾಡುತ್ತಿದೆ. ವಿದ್ಯುತ್ ಅವಘಡದಿಂದ ರೈತರು ಮೃತಪಟ್ಟಾಗ ವಿದ್ಯುತ್ ಇಲಾಖೆ ಸಾವನಪ್ಪಿದ್ದ ಕುಟುಂಬಕ್ಕೆ ಒಂದಷ್ಟು ಪರಿಹಾರ ನೀಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಪ್ರತಿ ಬಾರಿ ರೈತರ ಸಾವು ಸಂಭವಿಸಿದಾಗಲೂ ಅದನ್ನು ತಡೆಗಟ್ಟಲು ಅಗತ್ಯ ಕ್ರಮವಹಿಸದೆ ಹಣದ ಪರಿಹಾರ ನೀಡಿಕೆಯೊಂದೇ ನಡೆಯುತ್ತಿರುವುದು ನಮ್ಮ ವ್ಯವಸ್ಥೆಯ ಲೋಪದ ಕ್ರೂರ ಮುಖವಾಗುತ್ತಿದೆ.
ವಿದ್ಯುತ್ ಪ್ರಸರಣ ಕೇಂದ್ರದಿಂದ ಸರಬರಾಜು ಆಗುವ ವಿದ್ಯುತ್ ಅನ್ನು ವಿದ್ಯುತ್ ಪರಿವರ್ತಕಗಳ (ಟಿ.ಸಿ ) ಮೂಲಕ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡಲಾಗುತ್ತದೆ. ಇಲ್ಲಿ ವಿದ್ಯುತ್ ಪರಿವರ್ತಕಕ್ಕೆ ಬರುವ ವಿದ್ಯುತ್ ಸರಬರಾಜು ಮಾಡುವ ವೈರ್‍ಗಳಲ್ಲಿ ಏನಾದರೂ ವಿದ್ಯುತ್ ಅವಘಡವಾದರೆ ತಾನೇತಾನಾಗಿ ವಿದ್ಯುತ್ ಸರಬರಾಜು ನಿಂತು ಹೋಗುತ್ತದೆ. ಆದರೆ ವಿದ್ಯುತ್ ಪರಿವರ್ತಕ ದಿಂದ ಪಂಪ್‍ಸೆಟ್‍ಗೆ ಹೋಗುವ ವಿದ್ಯುತ್ ತಂತಿ ಏನಾದರೂ ತುಂಡಾಗಿ ಬಿದ್ದರೆ ವಿದ್ಯುತ್ ಪರಿವರ್ತಕದಲ್ಲಿರುವ ಅರ್ಥಿಂಗ್ ಮೂಲಕ ಭೂಮಿಗೆ ವಿದ್ಯುತ್ ಹರಿದು ಟಿಸಿಯ ಪ್ಯೂಸ್ ತುಂಡಾಗಬೇಕಾಗುತ್ತದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಈ ಪ್ರಕ್ರಿಯೆ ಸರಿಯಾಗಿ ನಡೆಯದೆ ವಿದ್ಯುತ್ ತಂತಿಗಳು ನೆಲಕ್ಕೆ ಬಿದ್ದರೂ ವಿದ್ಯುತ್ ಹರಿಯುತ್ತಿರುತ್ತದೆ. ಇದರಿಂದಾಗಿ ಜಮೀನಿನಲ್ಲಿ ಓಡಾಡುವ ರೈತರು ಇವುಗಳನ್ನು ತುಳಿದು ಸಾವನಪ್ಪುವ ಸಂಗತಿಗಳು ಹೆಚ್ಚಾಗುತ್ತಿವೆ. ಇದರ ಜತೆಗೆ ಹಳೆಯ ಇಲಾಖೆ ವಿದ್ಯುತ್ ತಂತಿಗಳನ್ನು ಬದಲಾಯಿಸದೇ ಇರುವುದರಿಂದ ತಮ್ಮ ಸಾಮಥ್ರ್ಯ ಕಳೆದುಕೊಂಡು ವಿದ್ಯುತ್ ತಂತಿಗಳು ತುಂಡಾಗುತ್ತಿವೆ. ಇದರ ಬಗ್ಗೆ ವಿದ್ಯುತ್ ಇಲಾಖೆ ಸೂಕ್ತ ಕ್ರಮ ವಹಿಸುತ್ತಿಲ್ಲ. ಪರಿಣಾಮ ಸೆಸ್ಕಾಂ ಆಡಳಿತ ವೈಪಲ್ಯಕ್ಕೆ ತಾಲೂಕಿನಲ್ಲಿ ಅಮಾಯಕ ರೈತರು ಮತ್ತು ಅವರು ಬದುಕಿನ ಭಾಗವಾದ ಜಾನುವಾರುಗಳು ಬಲಿಯಾಗುತ್ತಿವೆ.
ಅಭಿಪ್ರಾಯ: ತಾಲೂಕಿನಲ್ಲಿ ಬಹುತೇಕ ಎಲ್ಲಾ ವಿದ್ಯುತ್ ಲೈನ್ ಗಳು 1970-72 ರ ಅವಧಿಯಲ್ಲಿ ಅಳವಡಿಸಿದ ಲೈನ್ ಗಳು. ಹಳೆಯ ಲೈನುಗಳು ದುರ್ಬಲವಾಗಿದ್ದು ತಮ್ಮ ಸಾಮಥ್ರ್ಯ ಕಳೆದುಕೊಂಡಿವೆ. ಹಳೆಯ ಲೈನುಗಳನ್ನು ಬದಲಿಸಿ ಹೊಸ ವಿದ್ಯುತ್ ಲೈನ್ ಎಳೆಯುವಂತೆ ತಾಲೂಕು ರೈತಸಂಘ ಮರ?ನಾಲ್ಕು ಬಾರಿ ಸೆಸ್ಕಾಂ ಕಛೇರಿಯ ಮುಂದೆ ಚಳುವಳಿ ಮಾಡಿ ಸೆಸ್ಕಾ ಎಂ.ಡಿ ಅವರ ಗಮನವನ್ನೂ ಸೆಳೆದಿದೆ. ಆದರೆ ವಿದ್ಯುತ್ ಇಲಾಖೆ ಮಾತ್ರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.
ವಿದ್ಯುತ್ ಅವಘಡದಿಂದ ಸತ್ತ ರೈತ ರೈತ ಕುಟುಂಬಗಳಿಗೆ ಒಂದಷ್ಟು ಪರಿಹಾರ ನೀಡಿ ಸಾಂತ್ವನ ಹೇಳುವ ಬದುಲು ಅವರ ಜೀವ ರಕ್ಷಣೆಗೆ ಆದ್ಯತೆ ನೀಡಬೇಕು. ಕ್ಷೇತ್ರದ ಶಾಸಕರು ವಿದ್ಯುತ್ ಅವಘಡಗಳಿಂದ ಸಾವನಪ್ಪುತ್ತಿರುವ ರೈತ ಕುಟುಂಬಗಳ ಬಗ್ಗೆ ಸದನದಲ್ಲಿ ಧ್ವನಿಯೆತ್ತಿ ಮೊಂಡು ಬಿದ್ದಿರುವ ವಿದ್ಯುತ್ ಇಲಾಖೆಗೆ ಒಂದಷ್ಟು ಸಾಣೆ ಹಿಡಿಯುವ ಕೆಲಸ ಮಾಡಬೇಕು ಎನ್ನುತ್ತಾರೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ.