ರಸ್ತೆ ಪೂರ್ಣಗೊಳಿಸಲು ಆಗ್ರಹ
ಗುಳೇದಗುಡ್ಡ,ಜೂ.4: : ಪಟ್ಟಣದ ಡಿವಿಜನ್ ನಂ.4 ಹಾಗೂ 5ರ ಮಧ್ಯದಲಿರುವ ರಸ್ತೆಯನ್ನು ನಿರ್ಮಿಸಲು ಕಳೆದ ಎರಡು ತಿಂಗಳ ಹಿಂದೆ ಅಗೆದು ಬಿಟ್ಟಿದ್ದು, ರಸ್ತೆಯನ್ನು ಪೂರ್ಣಗೊಳಿಸದೇ ಇರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಾಗಿದೆ.
ಕಳೆದ ಎರಡು ತಿಂಗಳ ಹಿಂದೆ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸುತ್ತಿದ್ದಾಗ ರಸ್ತೆಯನ್ನು ಸರಿಯಾಗಿ ನಿರ್ಮಾಣ ಮಾಡುತ್ತಿಲ್ಲ ಎಂದು ಸ್ಥಳೀಯರು ದೂರಿದ ಹಿನ್ನಲೆಯಲ್ಲಿ ಗುತ್ತಿಗೆದಾರರು ಕಾಮಗಾರಿಯನ್ನು ಅಲ್ಲಿಗೆ ನಿಲ್ಲಿಸಿ, ಅಗೆದ ರಸ್ತೆಯನ್ನು ಬಿಟ್ಟು ಹೋಗಿದ್ದಾರೆ. ಇದರಿಂದ ರಸ್ತೆಯುದ್ದಕ್ಕು ತಗ್ಗು,ದಿನ್ನೆಗಳು ಬಿದ್ದಿದ್ದು ಸಾರ್ವಜನಿಕರು ಅಡ್ಡಾಡಲು ಕಷ್ಟಪಡುತ್ತಿದ್ದಾರೆ. ಬೈಕ್ ಸವಾರರು ಬೈಕ್‍ನಿಂದ ಬಿದ್ದು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ನಳದ ಪೈಪ್‍ಗಳು ಹೊರಗೆ ಕಾಣುತ್ತಿವೆ. ಕೂಡಲೇ ರಸ್ತೆ ನಿರ್ಮಿಸಿ, ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಸ್ತೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದರೂ ರಸ್ತೆ ಪೂರ್ಣಗಳಿಸುತ್ತಿಲ್ಲ. ಕೂಡಲೇ ರಸ್ತೆ ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ಪುರಸಭೆ ವಿರುದ್ಧ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಪುರಸಭೆ ಸದಸ್ಯರಾದ ಉಮೇಶ ಹುನಗುಂದ ಹೇಳಿದ್ದಾರೆ.