ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.04: ದಾನಗಳಲ್ಲಿ ರಕ್ತದಾನ ಶ್ರೇಷ್ಟ ದಾನವಾಗಿದೆ ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುವುದರ ಜೊತೆಗೆ ರಕ್ತ ಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ನೆರವಾಗುತ್ತದೆ ಎಂದು ಪ್ರಾಂಶುಪಾಲೆ ಹೆಚ್.ಎಂ.ಹೇಮಲತಾ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೋಟಿ ಕೋಟಿ ಹಣವಿದ್ದರು ಅರೋಗ್ಯವಿಲ್ಲದಿದ್ದರೆ ಅದು ಶೂನ್ಯ. ಆದ್ದರಿಂದ ಆರೋಗ್ಯವಂತ ಯುವಕರು ಯುವತಿಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಆರೋಗ್ಯವಂತ ಸಮಾಜಕ್ಕೆ ಕೈಜೋಡಿಸಬೇಕು. ನಾವೆಲ್ಲರೂ ಸಹಕಾರ, ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ. ಹಾಗೇ ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಬೇಕು. ನಮ್ಮ ಪೂರ್ವಜರು ಹಿಂದಿನ ಕಾಲದಲ್ಲಿ ಬರಿಗಾಲಲ್ಲಿ ನಡೆಯುತ್ತಿದ್ದರು.
ಜಮೀನಿನಲ್ಲಿ ದುಡಿಮೆ ಮಾಡುತ್ತಿದ್ದರುಆದರೆ ಈಗಿನ ಯುವ ಜನರು ಇದರ ಬಗ್ಗೆ ಆಸಕ್ತಿ ಕಡಿಮೆಯಾಗಿರುವುದರಿಂದ ಸಕ್ಕರೆ ಖಾಯಿಲೆ, ರಕ್ತದೊತ್ತಡ ಸೇರಿದಂತೆ ಹಲವಾರು ಖಾಯಿಲೆಗಳಿಗೆ ತುತ್ತಾಗಿ ಬಳಲುತ್ತಿರುವುದನ್ನು ನೋಡುತ್ತಿದ್ದೇವೆ. ಇಂದಿನ ಆಹಾರ ಪದ್ದತಿಯನ್ನು ಬದಲಾವಣೆ ಮಾಡಿಕೊಂಡು ಗುಣಮಟ್ಟದ ಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಿ.ಎ.ಮಂಜುನಾಥ್ ಮಾತನಾಡಿ ಕೆಲವರು ರಕ್ತದಾನ ಮಾಡುವುದಕ್ಕೆ ಭಯಪಡುತ್ತಾರೆ ಭಯಪಡುವ ಅವಶ್ಯಕತೆ ಇರುವುದಿಲ್ಲ ಯಾಕೆಂದರೆ ರಕ್ತದಾನ ಮಾಡಿದ ದಿನದಿಂದ ಮೂರು ತಿಂಗಳ ಒಳಗೆ ರಕ್ತ ಕ್ರೂಢೀಕರಣವಾಗುತ್ತದೆ. 18 ವಯಸ್ಸಿನಿಂದ 65 ವಯಸ್ಸಿನ ವರೆಗೂ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಶುಗರ್, ಬಿ ಪಿ ಇರುವ ವ್ಯಕ್ತಿಗಳು ಸಹ ರಕ್ತದಾನ ಮಾಡಬಹುದು ಆದ್ದರಿಂದ ರಕ್ತದಾನ ಮಾಡಿ ನೀವೂ ಆರೋಗ್ಯ ಕಾಪಾಡಿಕೊಂಡು ಇತರರನ್ನು ಉಳಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಗಿರೀಶ್ ಸಮಿತಿಯ ಸದಸ್ಯರುಗಳಾದ ಜಯಕೀರ್ತಿ, ರಘು.ಹೆಚ್.ಎನ್, ಮೋಹನ್‍ಕುಮಾರ್.ಎ.ವಿ, ಪುಪ್ಪಲತಾ ವೈ.ಎನ್, ರಾಜೀವ್.ಎಂ.ಪಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.