ಡಾ.ಯತೀಂದ್ರಗೆ ಟಿಕೆಟ್: ಪಕ್ಷಕ್ಕೆ ಕೃತಜ್ಞತೆ ಸಲ್ಲಿಸಿದ ಬಿ.ಸುಬ್ರಹ್ಮಣ್ಯ
ಸಂಜೆವಾಣಿ ನ್ಯೂಸ್
ಮೈಸೂರು, ಜೂನ್ 4:- ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಘೋಷಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಸಲ್ಲಿಸಿದ್ದಾರೆ.
ಈ ಬಗ್ಗೆ ಮಾತಡಿರುವ ಅವರು, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾಡಿನ ಹಿತದೃಷ್ಟಿಯಿಂದ ತಾವು ಪ್ರತಿನಿಧಿಸುತ್ತಿದ್ದ ವರುಣ ಕ್ಷೇತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತ್ಯಾಗ ಮಾಡಿದ್ದ ಡಾ. ಯತೀಂದ್ರ ಅವರಿಗೆ ಪಕ್ಷ ಸೂಕ್ತ ಪ್ರಾತಿನಿಧ್ಯ ನೀಡಿದೆ. ಈ ಮೂಲಕ ನಾಡಿನ ಸಮಸ್ತ ಕುರುಬ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತದೆ ಎಂದಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಸುಭದ್ರ ಸರ್ಕಾರ ರಚನೆಯಾಗಲು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸಮರ್ಥ ನಾಯಕತ್ವ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಸಂಘಟನಾ ಚತುರತೆ ಕಾರಣ. ಇವರೊಟ್ಟಿಗೆ ಕೈಜೋಡಿಸಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಡಾ. ಯತೀಂದ್ರ ಅವರು ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಾಡಿನಾದ್ಯಂತ ಸಂಚರಿಸಿ, ಸಂಘಟಿಸಿ ಪಕ್ಷಕ್ಕೆ ಸ್ಮರಣೀಯ ಕೊಡುಗೆ ನೀಡಿದ್ದಾರೆ. ಯಾರು ಪಕ್ಷನಿಷ್ಠರಿರುತ್ತಾರೋ ಅಂತಹವರಿಗೆ ಮಣೆ ಹಾಕುವ ಮೂಲಕ ಕಾಂಗ್ರೆಸ್ ಬದ್ಧತೆ ಪ್ರದರ್ಶಿಸಿದೆ. ಇದಕ್ಕೆ ಕಾರಣಕರ್ತರಾದ ಎಐಸಿಸಿ ಅಧ್ಯಕ್ಷರಾದ ಎಂ.ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿಯಾದ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್ ಅವರಿಗೂ ಅಭಿನಂದನೆ ಸಲ್ಲಿಸುತ್ತೇವೆಂದು ತಿಳಿಸಿದ್ದಾರೆ.
ಮುಂಬುರುವ ನಗರಪಾಲಿಕೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಡಾ. ಯತೀಂದ್ರ ಸಿದ್ದರಾಮಯ್ಯ ಫ್ಯಾಕ್ಟರ್ ಪರಿಣಾಮ ಬೀರಲಿದ್ದು, ಪಕ್ಷ ಸಂಘಟನೆಗೆ ಮತ್ತಷ್ಟು ಅನುಕೂಲವಾಗಲಿದೆ. ಹಾಗೆಯೇ ಕಾಂಗ್ರೆಸ್ ಪಕ್ಷವು ಕುರುಬ ಸಮುದಾಯಕ್ಕೆ ಮನ್ನಣೆ ನೀಡುತ್ತಿರುವುದರಿಂದ ಸಿದ್ದರಾಮಯ್ಯ ಬೆನ್ನಿಗೆ ಕುರುಬ ಸಮುದಾಯ ನಿಲ್ಲಲಿದೆ. ಈ ಚುನಾವಣೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ಕುರುಬ ಸಮುದಾಯಕ್ಕೆ ಯಾವ ಮನ್ನಣೆ ನೀಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.