ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅತೀ ಮುಖ್ಯ:ಅರವಿಂದ ಕುಲಕರ್ಣಿ
ಬೀದರ: ಸೆ.24:ಶಿಕ್ಷಕ ಒಬ್ಬ ಶಿಲ್ಪಿ ಇದ್ದ ಹಾಗೆ ಅವರಿಗೆ ಕೊಟ್ಟಿರುವ ವಿದ್ಯಾರ್ಥಿ ಎಂಬ ಕಲ್ಲನ್ನು ಅಚ್ಚುಕಟ್ಟಾಗಿ ಕೆತ್ತಿ ಸುಂದರ ರೂಪ ನೀಡಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಶಿಕ್ಷಕರನ್ನು ನಾವಿಂದು ನೆನೆಯೋಣ ಎಂದು ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ನುಡಿದರು.
ನಗರದ ಕಲ್ಯಾಣ ಕರ್ನಾಟಕ ಮಿತ್ರ ಮಂಡಳಿಯ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತು, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ, ಕಲ್ಯಾಣ ಭಾರತಿ ಕಲೆ ಸಾಹಿತ್ಯ ಹಾಗೂ ಸಾಂಸ್ಕøತಿಕ ಟ್ರಸ್ಟ, ಮದರ ತೆರೇಸಾ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಹಾಗು ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ರಾಷ್ಟ್ರಕವಿ ಕುವೆಂಪು ರವರು ಹೇಳಿದಂತೆ ಪ್ರತಿಯೊಬ್ಬರ ಜೀವನದಲ್ಲಿ ಗುರಿ ಮತ್ತು ಗುರು ಅತೀ ಮುಖ್ಯ ಹಲವರ ಜೀವನದಲ್ಲಿ ಗುರುಗಳು ಬೀರಿದ ಪ್ರಭಾವದಿಂದ ಅವರ ಜೀವನದ ದಿಕ್ಕನ್ನೇ ಬದಲಿಸಿದೆ ಶಿಕ್ಷಕ ಅನ್ನೋದು ಕೇವಲ ಮೂರು ಅಕ್ಷರಗಳ ಪದವಲ್ಲ ಅದು ಇಡೀ ಜಗತ್ತನೆ ಬೆಳಗುವ ಪದ ಆದ್ದರಿಂದ ಮಕ್ಕಳು ಸದಾ ಶಿಕ್ಷಕರು ನೀಡುವ ಎಲ್ಲಾ ಮಾರ್ಗದರ್ಶನವನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಜೀವನದಲ್ಲಿ ಯಶಶ್ವಿಯಾಗಲು ಸಾಧ್ಯ ಎಂದು ನುಡಿದರು.
ಕಮಠಾಣಾದ ಸರ್ಕಾರಿ ಪ್ರೌಢ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ರವಿಕುಮಾರ ಕುಮನೂರ ಮುಖ್ಯ ಅತಿಥಿಯಾಗಿ ಮಾತನಾಡಿ ಗುರುವೇ ದೇವರು ಎಂದು ನಂಬಿರುವ ಶ್ರೇಷ್ಠ ಸಂಸ್ಕೃತಿ ನಮ್ಮದು, ಗುರುಗಳು ಸದಾ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಿ ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸುವುದನ್ನು ಕಲಿಸಿ ಮಕ್ಕಳು ಉತ್ತಮ ಪ್ರಜೆಯಗಲು ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಾರೆ, ಆದ್ಧರಿಂದ ಗುರುಗಳ ಮಾರ್ಗದರ್ಶನ ಸದಾ ವಿದ್ಯಾರ್ಥಿಗಳೊಂದಿಗಿರಲಿ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಲ್ಯಾಣ ಕರ್ನಾಟಕ ಮಿತ್ರ ಮಂಡಳಿಯ ಅಧ್ಯಕ್ಷರಾದ ಸಂಜೀವಕುಮಾರ ಸ್ವಾಮಿಯವರು ಮಾತನಾಡಿ ದೇಶಕ್ಕೆ ಅಮೂಲ್ಯ ರತ್ನಗಳನ್ನು ನೀಡುವ ಗುರುಗಳನ್ನು ಇಂದು ನೆನೆಯುದು ನಮ್ಮ ಸೌಭಾಗ್ಯ, ಮಕ್ಕಳು ಮುಗ್ಧ ಮಣ್ಣಿನ ಗೊಂಬೆಯಂತೆ ಅವರಿಗೆ ಹಾಗು ವಿವಿಧ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ ಗಣ್ಯರಿಗೆ ಮಾರ್ಗದರ್ಶನ ಮಾಡಿ ಗುರಿ ಸೇರಲು ಯಶಸ್ವಿಯಾಗಿಸಿದ ಗುರುಗಳನ್ನು ಇಂದು ಸ್ಮರಿಸಿ ಗೌರವಿಸೋಣ ಎಂದರು.
ಬೀದರ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಂತಹ ಸಮತಾ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಬಳಿರಾಮ ಕುರಾನಾಳೆ, ಅಂಬೇಡ್ಕರ ತತ್ವ ಪ್ರೌಢ ಶಾಲೆ ಯಾಕತಪುರನ ನರಸಿಂಗರಾವ ಕುಲಕರ್ಣಿ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಧೂಳಪ್ಪ ಬಿರಾದಾರ, ಇಲೇಶಕುಮಾರ ಸೋನಿ,ಮತ್ತು ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಹಿಮಾಲಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಅನಂತ ಕುಲಕರ್ಣಿ,ಶಾರದಾ ಪ್ರೌಢ ಶಾಲೆಯ ಹಿಂದಿ ಶಿಕ್ಷಕರಾದ ಮಾರುತಿ ಬಿರಾದಾರರವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಭೀಮಸೇನ ರಾವ, ವೀರಭದ್ರಪ್ಪ ಉಪ್ಪಿನ, ಸುರೇಶ್ ದೇಗಲಮಾಡಿ,ಎಂ. ಕೆ. ಪಾಟೀಲ್, ಸಮೀರ್ ಹುಸೇನ್, ಸಿದ್ರಾಮ ಹೂಗಾರ ಹಾಗು ಇತರರು ಉಪಸ್ಥಿತರಿದ್ದರು.