ಬೀದರ ಜಿಲ್ಲಾ ಕಾರಾಗೃಹದಲ್ಲಿ ಆರೋಗ್ಯ ತಪಾಸಣೆ
ಬೀದರ:ಸೆ.24: ವ್ಯಕ್ತಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿದ್ದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಅದಕ್ಕಾಗಿ ದೈನಂದಿನ ಜೀವನದಲ್ಲಿ ಯೋಗ ಪ್ರಾಣಾಯಾಮ, ಧ್ಯಾನ, ಮುಂತಾದವುಗಳು ರೂಡಿಸಿಕೊಳ್ಳುವುದು ಉತ್ತಮ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ದತ್ತಾತ್ರೇಯ ಮೇಧಾ ಅವರು ಅಭಿಪ್ರಾಯ ಪಟ್ಟರು .ಅವರು ಇಂದು ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ ಸಂಸ್ಥೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಬೀದರ್ ಇವರ ಸಯುಕ್ತಾಶ್ರಯದಲ್ಲಿ, ಜಿಲ್ಲಾ ಕಾರಾಗೃಹದಲ್ಲಿ ಏರ್ಪಡಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡುತ್ತಾ, ಎಲ್ಲರೂ ಆರೋಗ್ಯದ ಕಡೆ ಗಮನ ಹರಿಸಬೇಕು ರೋಗಿಗಳ ಬಗ್ಗೆ ಮಾಹಿತಿ ಪಡೆದು ಮುಂಜಾಗ್ರತೆ ವಹಿಸಿದ್ದಲ್ಲಿ ಅನೇಕ ರೋಗಗಳಿಂದ ದೂರವಿರಬಹುದು ಎಂದು ತಿಳಿಸಿದರು. ಅತಿಥಿಗಳಾದ ಜೈಲರ್ ಟಿ. ಬಿ.ಭಜಂತ್ರಿ ಅವರು ಮಾತನಾಡಿ, ಸರ್ಕಾರವು ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಪರಿಣಿತ ತಜ್ಞರಿಂದ ಸಕಾಲಕ್ಕೆ ಪರೀಕ್ಷೆ ಮಾಡಿಸಿ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ನುಡಿದರು.
ಕಾರಾಗೃಹದ ವೈದ್ಯಾಧಿಕಾರಿ ಡಾ. ಶರಣಯ್ಯ ಸ್ವಾಮಿ ಮಾತನಾಡಿ, ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ ಎಂಬಂತೆ ಆರೋಗ್ಯ ಇಲಾಖೆ ಜನರ ಉತ್ತಮ ಆರೋಗ್ಯಕ್ಕಾಗಿ ಶ್ರಮಿಸಲು ಸದಾ ಸಿದ್ಧವಾಗಿದೆ ಇದರ ಸದುಪಯೋಗವನ್ನು ಪಡೆಯಬೇಕೆಂದು ಕರೆ ನೀಡಿದರು.
ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಯಾದ ಅರವಿಂದ್ ಕುಲಕರ್ಣಿ ಅವರು ಮಾತನಾಡಿ, 2030ರ ವರೆಗೆ ಕ್ಷಯರೋಗ ಮತ್ತು ಎಚ್.ಐ.ವಿ ಮುಕ್ತ ಭಾರತ ನಿರ್ಮಾಣ ಮಾಡಲು ಸಮಾಜದ ಎಲ್ಲಾ ಸಮುಹದವರು ಸಹಕಾರ ನೀಡಬೇಕು ಎಚ್‍ಐವಿ ಏಡ್ಸ್ ಮತ್ತು ಕ್ಷಯ ನಿರ್ಮೂಲನೆಗೆ ಜಾಗೃತಿ ಮಾಡಲಾಗುತ್ತಿದೆ, ಮಾಹಿತಿಯ ಕೊರತೆಯಿಂದ ರೋಗಗಳು ಉಲ್ಬಣಗೊಳ್ಳುತ್ತದೆ, ಮತ್ತು ಇತರರಿಗೆ ಹರಡುತ್ತದೆ. ಆದ್ದರಿಂದ ಮಾಹಿತಿಯನ್ನು ಪಡೆದು ಇತರರಿಗೆ ತಿಳಿ ಹೇಳುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಆಪ್ತ ಸಮಾಲೋಚಕರಾದ ಸಿದ್ದಪ್ಪ ಉಪ್ಪಾರ ರವರು ಮಾತನಾಡಿ, ಎಚ್‍ಐವಿ ಏಡ್ಸ್, ಕ್ಷಯರೋಗ ಹರಡುವ ವಿಧಾನಗಳು ಮತ್ತು ತಡೆಗಟ್ಟುವ ಮಾರ್ಗಗಳನ್ನು ತಿಳಿಸಿದರು.
ಆಪ್ತ ಸಮಾಲೋಚಕಿ ಶ್ರೀಮತಿ ಲಕ್ಷ್ಮಿ ಅವರು ಲೈಂಗಿಕ ಸಮಸ್ಯ ಗುಪ್ತ ರೋಗಗಳ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಔಷಧ ವಿತರಕ ಅಧಿಕಾರಿ ಸಂತೋಷ ರೆಡ್ಡಿ, ಸ್ವಾಮಿ ವಿವೇಕಾನಂದ ಸಂಸ್ಥೆಯ ಶಾಂತಲಿಂಗ ಉಪಸ್ಥಿತ ರಿದ್ದರು. ಈ ಸಂದರ್ಭದಲ್ಲಿ ಸುಮಾರು 75 ಜನರ ಎಚ್‍ಐವಿ ಪರೀಕ್ಷೆ , ಶಿಫಲಿಸ್, ಕಾಮಲೇ, ಎಚ್‍ಸಿವಿ, ಮಧುಮೇಹ ರಕ್ತದೊತ್ತಡ ಪರೀಕ್ಷೆಗಳನ್ನು ಮಾಡಲಾಯಿತು.