ಐಸಿಡಿಎಸ್ ಉಳಿಸಲು ಆಗ್ರಹ:ಅಂಗನವಾಡಿ ನೌಕರರ ಪ್ರತಿಭಟನೆ
ಕಲಬುರಗಿ,ಜೂ .3: ವಿಭಾಗೀಯ ಶಿಕ್ಷಣ ಇಲಾಖೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಇಸಿಸಿಇ ಶಿಕ್ಷಣವನ್ನು ಪ್ರಾರಂಭಿಸಲು ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ವಾಪಸ್ಸು ಪಡೆಯಬೇಕು.ಐಸಿಡಿಎಸ್ ಕೆಲಸವನ್ನು ಖಾಯಂ ಆಗಿ ಮುಚ್ಚಿಸುವ ಕೆಲಸವನ್ನು ಶಿಕ್ಷಣ ಇಲಾಖೆ ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಅಂಗನವಾಡಿ ನೌಕರರು ಇಂದು ಗುಲಬರ್ಗ ಚಲೋ ನಡೆಸಿ ಕೆಕೆಆರ್‍ಡಿಬಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಐಸಿಡಿಎಸ್ ನಡಿಯಲ್ಲಿ ಅನುಭವ ಇರುವ ಮಕ್ಕಳೊಡನೆ ಬೆರೆಯುವಂತಹ ಕಲೆ ಇರುವ ಶಿಕ್ಷಣವಂತ ಅಂಗನವಾಡಿ ನೌಕರರು ಇರುವಾಗ ಪಿಯುಸಿ ಮಾನದಂಡದ ಮೇಲೆ ಹೊಸದಾಗಿ ಅತಿಥಿ ಶಿಕ್ಷಕರನ್ನು ನೇಮಿಸಿ ಅವರಿಗೆ ತರಬೇತಿ ಕೊಟ್ಟು ಕೆಲಸ ಮಾಡಿಸಿದರೆ ಮಕ್ಕಳ ಒಡನಾಟ ಎಂಬುದು ಖಂಡಿತ ಸಾಧ್ಯವಿಲ್ಲ.ಸರಕಾರ ಇಂತಹ ನಕಲು ಯೋಜನೆಗಳನ್ನು ಜಾರಿಗೆ ತರುವದು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕಾರ್ಯಾಧ್ಯಕ್ಷೆ ಶಾಂತಾ ಘಂಟೆ,ಹೆಚ್.ಎಸ್ ಸುನಂದ,ಕೆ.ನೀಲಾ,ಗೌರಮ್ಮ ಪಾಟೀಲ,ಶ್ರೀದೇವಿ ಚಂಡೆ,ಎಚ್ ಪದ್ಮಾ,ಗಿರಿಜಾ,ಉಮಾ ,ಬಸಲಿಂಗಮ್ಮ,ನಾಗರತ್ನ ಸೇರಿದಂತೆ ಹಲವರು ಪಾಲ್ಗೊಂಡರು.