ವಿಜಯಪುರ ಜಿಲ್ಲೆಯಾದ್ಯಂತ ಧಾರಾಕಾರ ಮಳೆ
ವಿಜಯಪುರ,ಜೂ.3: ವಿಜಯಪುರ ಜಿಲ್ಲೆಯಲ್ಲಿ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದ್ದು, ಹೊಲ ಗದ್ದೆಗಳಲ್ಲಿ ನೀರು ನಿಂತಿದೆ. ಇದು ಪ್ರಸಕ್ತ ಸಾಲಿನ ಉತ್ತಮ ಮಳೆಯಾಗಿದೆ.
ಕಳೆದ ಎರಡು ತಿಂಗಳಿಂದ ಉರಿ ಬಿಸಿಲಿನ ಹೊಡೆತಕ್ಕೆ ತತ್ತರಿಸಿದ್ದ ಜಿಲ್ಲೆಯ ಜನ ತಂಪು ವಾತಾವರಣದಿಂದ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ರೈತ ಬಾಂಧವರು ಹದವಾದ ಮಳೆ ಬಿದ್ದಿದೆ. ಮುಂಗಾರು ಬಿತ್ತನೆಗೆ ಅನುಕೂಲವಾಗಿದೆ ಎಂದು ಹರ್ಷಗೊಂಡಿದ್ದಾರೆ.
ಜಿಲ್ಲೆಯ ಹಲವೆಡೆ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ. ದೇವರ ಹಿಪ್ಪರಗಿ ತಾಲೂಕಿನ ಹರನಾಳದಲ್ಲಿ ಅತ್ಯಧಿಕ 12.20 ಸೆಂ. ಮೀ. ಮಳೆ ದಾಖಲಾಗಿದೆ.
ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ದಾಖಲಾದ ಸ್ಥಳಗಳ ವಿವರ ಇಂತಿದೆ.
ದೇವರ ಹಿಪ್ಪರಗಿ ತಾಲೂಕು- ಹರನಾಳ- 12.20 ಸೆಂ. ಮೀ
ತಾಳಿಕೋಟೆ ತಾಲೂಕು- ಹಿರೂರ- 10.10 ಸೆಂ. ಮೀ.
ಬಸವನ ಬಾಗೇವಾಡಿ ತಾಲೂಕು- ಕಣಕಾಲ- 9.95 ಸೆಂ. ಮೀ.
ಬಸವನ ಬಾಗೇವಾಡಿ ತಾಲೂಕು- ಡೋಣೂರ-8.90 ಸೆಂ. ಮೀ.
ವಿಜಯಪುರ ತಾಲೂಕು- ಬರಟಗಿ- 9.25 ಸೆಂ. ಮೀ.
ವಿಜಯಪುರ ತಾಲೂಕು- ಅರಕೇರಿ- 8.65 ಸೆಂ. ಮೀ.
ಸಿಂದಗಿ ತಾಲೂಕು- ರಾಂಪುರ ಪಿಎ- 8.70 ಸೆಂ. ಮೀ.
ಮುದ್ದೇಬಿಹಾಳ ತಾಲೂಕು- ಬಿದರಕುಂದಿ- 8.50 ಸೆಂ. ಮೀ.
ಮುದ್ದೇಬಿಹಾಳ ತಾಲೂಕು- ಕವಡಿಮಟ್ಟಿ- 8.30 ಸೆಂ. ಮೀ.
ಇಂಡಿ ತಾಲೂಕು- ನಿಂಬಾಳ ಕೆಡಿ- 8.35 ಸೆಂ. ಮೀ.
ಇಂಡಿ ತಾಲೂಕು- ನಾದ ಕೆಡಿ- 8 ಸೆಂ. ಮೀ. ಮಳೆ ಬಿದ್ದಿದೆ.
ವಿಜಯಪುರದಲ್ಲಿ ನಿನ್ನೆ ರಾತ್ರಿ 8 ಗಂಟೆಗೆ ಮಳೆ ಆರಂಭವಾಗಿ ಇಡೀ ರಾತ್ರಿ ಧಾರಾಕಾರ ಮಳೆಯಾಗಿದೆ. ಇಂದು ಬೆಳಗ್ಗೆ 8 ಗಂಟೆವರೆಗೂ ಜಿಟಿಜಿಟಿ ಮಳೆ ಮುಂದುವರೆದಿತ್ತು. ಇನ್ನೂ ಮೋಡ ಕವಿದ ವಾತಾವರಣವಿದ್ದು,, ಆಗಾಗ ಬಿಸಿಲು ಬೀಳುತ್ತಿದೆ.
ವಿಜಯಪುರ ಜಿಲ್ಲೆಯಲ್ಲಿ ಇನ್ನೆರಡು ದಿನ ಮಳೆ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೋಶದ ಮೂಲಗಳು ಮಾಹಿತಿ ನೀಡಿವೆ.