ವಿಧಾನ ಪರಿಷತ್ತಿನ ಮೇಲ್ಮನೆ ಚುನಾವಣೆಯ ಪಾವಿತ್ರ್ಯತೆ ಉಳಿಯಬೇಕು: ಬಿ.ಎಂ ರಾವ್
ಅಫಜಲಪುರ:ಜೂ.3: ಪದವೀಧರ ಮತದಾರರು ಜಾಗೃತರಾಗಿ ಯಾವುದೇ ಆಸೆ ಆಮೀಷಗಳಿಗೆ ಒಳಗಾಗದೆ ಮತ ಚಲಾಯಿಸಿದಾಗ ಮಾತ್ರ ಚಿಂತಕರ ಚಾವಡಿ ಎಂದೇ ಕರೆಯಲ್ಪಡುವ ವಿಧಾನಸಭೆ ಮೇಲ್ಮನೆ ಚುನಾವಣೆಯ ಪಾವಿತ್ರ್ಯತೆ ಉಳಿಯಲಿದೆ ಎಂದು ಶಿರವಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಅಧ್ಯಾಪಕ ಹಾಗೂ ಸಾಹಿತಿ ಬಿ.ಎಂ ರಾವ್ ತಿಳಿಸಿದರು.
ತಾಲೂಕಿನ ಮಲ್ಲಾಬಾದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಸೋಮವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮತ ಚಲಾಯಿಸಿ ಮಾತನಾಡಿದ ಅವರು, ಉದ್ಯೋಗದಲ್ಲಿ ವಯೋಮಿತಿ ಮೀರಿದವರಿಗೆ ಅಂದರೆ 40 ವರ್ಷ ಒಳಗಿನ ಪದವೀಧರರಿಗೆ ಆದ್ಯತೆ ನೀಡಬೇಕು. ಪದವೀಧರರು ತಮ್ಮ ಮತದಾನ ಹಕ್ಕಿಗಾಗಿ ತಪ್ಪದೇ ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಪದವೀಧರ ಸಮಸ್ಯೆಗಳಿಗೆ ಸ್ಪಂದಿಸುವ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಪದವೀಧರ ಮತದಾರರು ಜಾಗೃತರಾಗಿ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಶಿವಾನಂದ ಗಾಡಿ ಸಾಹುಕಾರ, ಶ್ರೀಮಂತ ಭಂಡಾರಿ, ಮಹಾಂತಪ್ಪ ಬಬಲೇಶ್ವರ, ನಿಂಗಣ್ಣ ಪೂಜಾರಿ, ಶಿವು ಸಿಂಗೆ, ಶಿವಶರಣ ತಳವಾರ, ದತ್ತು ಘಾಣೂರ, ಯಲ್ಲಾಲಿಂಗ ತಳವಾರ, ಲಕ್ಷ್ಮಣ ಮಾಂಗ ಅನೇಕರಿದ್ದರು.