ಸಸಿ ನೆಡುವ ಸಮಾಜ ಕಾರ್ಯನಡೆಯಲಿ: ಶಿವಲಿಂಗ ಶ್ರೀ
ಆಳಂದ:ಜೂ.3: ಪರಿಸರದಲ್ಲಾಗುವ ಪ್ರಕೃತಿ ವಿಕೋಪ ತಡೆಗೆ ಪರಿಸರ ಸಂರಕ್ಷಣೆಯೊಂದೇ ಪರಿಹಾರ ಎಂದು ನಿಂಬರ್ಗಾ ವಿರಕ್ತಮಠದ ಶ್ರೀ ಶಿವಲಿಂಗ ದೇವರು ತಿಳಿಸಿದರು.
ನಿಂಬರ್ಗಾದ ಶ್ರೀ ಹುಚ್ಚೆಶ್ವರ ವಿರಕ್ತ ಮಠದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಕಾರ್ಯಕರ್ತ ಬಸವರಾಜ ಯಳಸಂಗಿ ಅವರ 31ನೇ ಜನ್ಮದಿನದ ಪ್ರಯುಕ್ತ ಸಾರ್ವಜನಿಕರಿಗೆ ಸಸಿ ವಿತರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮಾನವ ಬದುಕಿಗೆ ಅರಣ್ಯ ಅತ್ಯವಶ್ಯಕ. ಕಾಡನ್ನು ಸಂರಂಕ್ಷಿಸಿದರೆ ಮಾತ್ರ ಮನುಷ್ಯ, ಪ್ರಾಣಿ ಪಕ್ಷಿಗಳು ಬದುಕಲು ಸಾಧ್ಯ ಎಂದ ಅವರು ಪ್ರತಿಯೊಬ್ಬರು ದುಂದುವೆಚ್ಚ ಮಾಡುವ ಬದಲು ಈ ರೀತಿಯಾಗಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿ ಗಿಡ ಮರ ಬೆಳೆಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಈ ಸಂಧರ್ಭದಲ್ಲಿ ಮಾತನಾಡಿದ ಬಸವರಾಜ ಯಳಸಂಗಿ ಕನ್ನಡ ರಾಜ್ಯೋತ್ಸವಕ್ಕೆ ವಿತರಿಸಿದ ಹಲವು ಸಸಿಗಳು ಉತ್ತಮವಾಗಿ ಬೆಳೆಯುತ್ತಿರುವುದು ಸಂತಸ ತಂದಿದೆ. ಗಿಡ ಮರ ಬೆಳೆಸುವುದರಿಂದ ಪ್ರಕೃತಿಯ ಸಂರಕ್ಷಣೆಯಾದಂತಾಗುತ್ತದೆ, ಜೀವಿಗಳಿಗೆ ಬೇಕಾದ ಆಮ್ಲಜನಕ ಒದಗಿಸಿದಂತಾಗುತ್ತದೆ ಎಂದರು. ವಿವಿಧ ಬಗೆಯ 40 ಸಸಿಗಳನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಪ್ರವೀಣ ಮೀಟೆಕಾರ, ಧರ್ಮರಾಯ ಕಾಮಣಗೋಳ, ಅನೀಲ ಮಠಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಅನೀಲ ನಾಗೂರ ನಿರೂಪಿಸಿದರು, ಶ್ರೀಶೈಲ ನಿಗಶೆಟ್ಟಿ ಸ್ವಾಗತಿಸಿದರು, ಕ್ಷೇಮಲಿಂಗ ಕಂಭಾರ ವಂದಿಸಿದರು.