ಸಂಸ್ಥೆಯ ಏಳ್ಗೆಗೆ ವೃತ್ತಿಗಾಂಭೀರ್ಯ ಬೋಧಕರೆ ಕಾರಣ: ಬಿ.ಜಿ ಶೆಟಕಾರ
ಬೀದರ:ಜೂ.3: ಒಂದು ಸಂಸ್ಥೆಯ ಏಳ್ಗೆಗೆ ವೃತ್ತಿ ಗಾಂಭೀರ್ಯತನ ಹೊಂದಿರುವ ಉಪನ್ಯಾಸಕರೇ ಮೂಲ ಕಾರಣೀಭೂತರಾಗುತ್ತಾರೆ. ನಾನು ನನ್ನದು ಎನ್ನದೆ ಕೌಟುಂಬಿಕ ಮನೋಭಾವ ಹೊಂದುತ್ತ ನಾವು ನಮ್ಮವರು ಎನ್ನುವ ಭಾವನೆಯೊಂದಿಗೆ ಪರಿಶ್ರಮ ಪಟ್ಟಾಗ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ.ಶೆಟಕಾರ ತಿಳಿಸಿದರು.
ನಗರದ ಕರ್ನಾಟಕ ಕಾಲೇಜಿನ ಸಭಾಂಗಣದಲ್ಲಿ ವಯೋನಿವೃತ್ತಿ ಹೊಂದಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಗನ್ನಾಥ ಹೆಬ್ಬಾಳೆ, ಸಸ್ಯಶಾಸ್ತ್ರ ವಿಭಾಗದ ಶಶಿಧರ ಪಾಟೀಲ ಹಾಗೂ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಎ.ಡಿ.ಶೆಟಕಾರ ಅವರ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಈ ಮೂವರೂ ಪ್ರಾಧ್ಯಾಪಕರ ಸೇವೆ ಕರ್ನಾಟಕ ಕಾಲೇಜಿಗೆ ಸಾಕಷ್ಟು ಸಂದಿದೆ. ಸುಮಾರು 36 ವರ್ಷಗಳ ವರೆಗೆ ಅವ್ಯಾಹತವಾಗಿ ದುಡಿದ ಇವರಿಗೆ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಇವರ ಸೇವೆ ಮುಂದುವರೆಸುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದರು. ಸಹಜವಾಗಿ ಅನುಭವಿ ಪ್ರಾಧ್ಯಾಪಕರು ನಿವೃತ್ತಿ ಹೊಂದಿದಾಗ ಸಹ ಪ್ರಾಧ್ಯಾಪಕರು ಜಿಗುಪ್ಸೆಗೊಳ್ಳುವುದು ಸಹಜ. ಆದರೆ ಜವಾಬ್ದಾರಿ ಪಡೆದು ಮುನ್ನಡೆಯಬೇಕೆಂದು ಸಲಹೆ ನೀಡಿದರು.
ಗುಲಬರ್ಗಾ ವಿ.ವಿ.ಯ ವಿಶ್ರಾಂತ ಕುಲಪತಿಗಳು ಹಾಗೂ ವಿಜ್ಞಾನಿ ಪ್ರೊ. ಬಿ.ಜಿ.ಮೂಲಿಮನಿ ಮಾತನಾಡಿ ಡಾ. ಹೆಬ್ಬಾಳೆಯವರು ಸದಾ ಒಂದಿಲ್ಲೊಂದು ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸೃಜನಶೀಲ ವ್ಯಕ್ತಿ. ಸಾಹಿತ್ಯ, ಸಂಸ್ಕøತಿ, ಜನಪದ ಉಳಿಸಿ ಬೆಳೆಸುವ ಸಾಧಕ. ಬೀದರನಿಂದ ದೆಹಲಿವರೆಗೆ ತನ್ನ ಕಾರ್ಯವ್ಯಾಪ್ತಿ ಹೊಂದಿರುವ ಕ್ರಿಯಾಶೀಲ ಬರಹಗಾರ. ಹೀಗಾಗಿ ಈ ಮೂವರು ಮಹನೀಯರ ಮುಂದಿನ ಭವಿಷ್ಯ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ವಯೋನಿವೃತ್ತಿ ಹೊಂದಿದ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ ನನ್ನ ಎಲ್ಲಾ ರೀತಿಯ ಏಳ್ಗೆಗೆ ಕ.ರಾ.ಶಿ ಸಂಸ್ಥೆ ಹಾಗೂ ಇಲ್ಲಿಯ ಆಡಳಿತ ಮಂಡಳಿ ಮೂಲ ಕಾರಣ. ಆರ್.ವಿ.ಬಿಡಪ್ ಹಿಡಿದು ಬಸವರಾಜ ಜಾಬಶೆಟ್ಟಿ ವರೆಗೆ ಎಲ್ಲರ ಸಹಕಾರ ನನಗೆ ಸಿಕ್ಕಿದೆ. ನನ್ನ ತಾಯಿ ಆಶಿರ್ವಾದದಿಂದ ಸಾಕಷ್ಟು ಸೇವೆ ಸಲ್ಲಿಸಿದ್ದೇನೆ. ಮುಂದಿನವರು ಸಹ ದಕ್ಷ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರಿ. ಅಧಿಕಾರ ಇದ್ದಾಗ ಅಹಂಕಾರ ತೊರೆದು ತಾಳ್ಮೆ ಮತ್ತು ವಿನಯದಿಂದ ಕೆಲಸ ಮಾಡಬೇಕು. ಕರ್ತವ್ಯದ ಸಂದರ್ಭದಲ್ಲಿ ನಿಂದೆ, ಏರು-ಪೇರು, ಎಡರು ತೊಡರುಗಳು ಸಹಜ. ಅವುಗಳನ್ನು ಮೆಟ್ಟಿನಿಂತು ಧೈರ್ಯದಿಂದ ಕರ್ತವ್ಯ ನಿಭಾಯಿಸಬೇಕೆಂದು ಹೆಬ್ಬಾಳೆ ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಮಲ್ಲಿಕಾರ್ಜುನ ಹಂಗರಗಿ ಪ್ರಾಸ್ತಾವಿಕವಾಗಿ ಮಾತನಾಡಿ ಆಡು ಮುಟ್ಟದ ಸೊಪ್ಪಿಲ್ಲ, ಡಾ. ಹೆಬ್ಬಾಳೆ ಮುಟ್ಟದ ಕ್ಷೇತ್ರಗಳಿಲ್ಲ. ಶಿಸ್ತು, ಸಂಯಮ, ಪ್ರಾಮಾಣಿಕತೆ ಅವರ ಉಸಿರಾಗಿಸಿಕೊಂಡಿದ್ದಾರೆ. ಹೆಬ್ಬಾಳೆಗೂ ಕರ್ನಾಟಕ ಕಾಲೇಜಿಗೂ ಅವಿನಾಭಾವ ಸಂಬಂಧವಿದೆ ಎಂದರು.
ವಯೋನಿವೃತ್ತಿ ಹೊಂದಿದ್ದ ಡಾ. ಜಗನ್ನಾಥ ಹೆಬ್ಬಾಳೆ, ಶಶಿಧರ ಪಾಟೀಲ ಹಾಗೂ ಪ್ರೊ. ಎ.ಡಿ.ಶೆಟಕಾರ ಅವರ ಕುರಿತು ಡಾ. ಸುನಿತಾ ಕೂಡ್ಲಿಕರ್, ಡಾ.ಶ್ವೇತಾ ಪಾಟೀಲ, ಡಾ.ಮಲ್ಲಿಕಾರ್ಜುನ ಚಲವಾ, ಡಾ.ಮಹಾನಂದ ಮಡಕಿ, ಆನಂದ ಮಾರ್ಟಿನಕರ್ ಸೇರಿದಂತೆ ಹಲವರು ಭಾವುಕರಾಗಿ ಮಾತನಾಡಿದರು. ವಯೋನಿವೃತ್ತಿ ಹೊಂದಿದ ಮೂವರು ಮಹನಿಯರಿಗೆ ದಂಪತಿಗಳ ಸಮೇತವಾಗಿ ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಕರಾಶಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಸಿಬ್ಬಂದಿ ಕಾರ್ಯದರ್ಶಿ ಶ್ರೀಕಾಂತ ದೊಡ್ಡಮನಿ ಇದ್ದರು. ಉಪ ಪ್ರಾಚಾರ್ಯ ಪ್ರೊ. ಅನೀಲಕುಮಾರ ಚಿಕ್ಕಮಾಣೂರ ಸ್ವಾಗತಿಸಿದರು. ಡಾ. ಮಹಾನಂದ ಮಡಕಿ ನಿರೂಪಿಸಿದರು. ಸಿಬ್ಬಂದಿ ಕಾರ್ಯದರ್ಶಿ ಶ್ರೀಕಾಂತ ದೊಡ್ಡಮನಿ ವಂದಿಸಿದರು.