ಪತ್ರಕರ್ತರು ದೇವಋಷಿ ನಾರದರ ಆದರ್ಶ ಅಳವಡಿಸಿಕೊಳ್ಳಿ: ನಾಗೇಶ ರೆಡ್ಡಿ
ಬೀದರ್:ಜೂ.3: ಇಂದು ಪತ್ರಕರ್ತರು ದೇವಋಷಿ ನಾರದರ ಆದರ್ಶ ಮೈಗೂಡಿಸಿಕೊಳ್ಳಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಕಾರಿಣಿ ಸದಸ್ಯರಾದ ನಾಗೇಶ ಚನ್ನಾರೆಡ್ಡಿ ಹೇಳಿದರು.
ರವಿವಾರ ನಗರದ ಸರಸ್ವತಿ ಶಾಲೆ ಅವರಣದಲ್ಲಿರುವ ಗಿರಿಜಾ ಸಭಾ ಭವನದಲ್ಲಿ ಕೇಶವ ಕಾರ್ಯ ಸಂವರ್ಧನಾ ಸಮಿತಿ ವತಿಯಿಂದ ಹಮ್ಮಿಕೊಂಡ ದೇವಋಇಷಿ ನಾರದರ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿರುವ ಅವರು, ಸಮಾಜದಲ್ಲಿರುವ ದುಷ್ಟ ವಿಚಾರಗಳನ್ನು ಶಿಷ್ಟರಿಗೆ ತಲುಪಿಸುವ ಮಹತ್ತರ ಕಾರ್ಯ ಆ ಕಾಲದಲ್ಲಿ ದೇವಋಷಿ ನಾರದರು ಮಾಡಿದಂತೆ ಪತ್ರಕರ್ತರಾದವರು ನೈಜ ಸಂಗತಿಗಳನ್ನು ಜನಮಾನಸಕ್ಕೆ ತಲುಪಿಸುವ ಮೂಲಕ ತಮ್ಮ ಪತ್ರಿಕಾ ಪಾವಿತ್ರತೆಯನ್ನು ಪ್ರದರ್ಶಿಸುವಂತೆ ಕರೆ ನೀಡಿದರು.
ಕೃತಾಯುಗದಲ್ಲಿ ನಾರದರು ಒಬ್ಬ ಪತ್ರಕರ್ತನಾಗಿ ತ್ರಿಲೋಕವನ್ನು ಭ್ರಮಣ ಮಾಡಿ ರಾಕ್ಷಸರನ್ನು ಸದೆ ಬಡಿಯಲು ದೇವವಂಶಜರಿಗೆ ಅವರ ದುಷ್ಟತೆಯನ್ನು ಪರಿಚಯ ನೀಡುವ ಮೂಲಕ ಹಾಗೂ ಅವರ ನ್ಯುನ್ನತೆಯನ್ನು ಎತ್ತಿ ತೋರಿಸಿ ಶಿಕ್ಷಿಸಲು ಪ್ರಚುರಪಡಿಸುತ್ತಿದ್ದರು. ಹಾಗೇ ಇಂದಿನ ದಿನಮಾನಗಳಲ್ಲಿ ಪತ್ರಕರ್ತರಾದವರು ಸಾಮಾಜಿಕ ಮೌಲ್ಯಗಳನ್ನು ಸಾರ್ವಜನಿಕರಿಗೆ ಪ್ರಚುರಪಡಿಸುವ ಜೊತೆಗೆ ಜನ ಸಾಮಾನ್ಯರ ಧ್ವನಿಯಾಗಿ ಅವರ ಸಮಸ್ಯೆಗಳನ್ನು ದೇಶವನ್ನಾಳುವ ಜನ ಪ್ರತಿನಿಧಿಗಳಿಗೆ ತಿಳಿಸುವ ಮಹತ್ತರ ಕಾರ್ಯ ಮಾಡಬೇಕಾಗಿದೆ ಎಂದರು.
ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಅವರು ಇಡೀ ದೆಶವನ್ನು ಜೈಲಿನೊಳಗೆ ಲಾಕ್ ಮಾಡಿದ್ದರು. ಆ ಸಮಯದಲ್ಲಿ ಪತ್ರಕತರ್ಯರನ್ನು ಸಹ ಬಿಡಲಿಲ್ಲ. ಅವರ ಸ್ವಾತಂತ್ರ ಬರವಣಿಗೆಗೆ ಕಡಿವಾಣ ಹಾಕಿದರು. ಆದರೂ ಪತ್ರಕರ್ತರು ತಮ್ಮ ಕರ್ತವ್ಯ ಪ್ರಜ್ಞೆ ಮೆರೆದು ಕೈ ಬರಹದ ಸಹಾಯದಿಂದ ಜನಮಾನಸಕ್ಕೆ ಸತ್ಯವನ್ನು ಪರಿಚಯಿಸುವ ಕಾರ್ಯ ಮಾಡಿದ್ದರಿಂದ ಮುಂದೆ ಇಂದಿರಾಜಿ ಚುನಾವಣೆಯಲ್ಲಿ ಸೋತು ಸುಣ್ಣವಾದರು. ಅಂಥ ಶಕ್ತಿ ಇರುವ ಪತ್ರಕರ್ತರು ತಮ್ಮ ಅಗೋಚರ ಶಕ್ತಿಯ ಬಗ್ಗೆ ಸದಾ ಜಾಗೃತರಾಗಿರಬೇಕಿದೆ ಎಂದರು.
ಪತ್ರಕರ್ತರೆಂದರೆ ಸಮಾಜದಲ್ಲಿ ಎಲ್ಲಿಲ್ಲದ ಗೌರವವಿರುತ್ತದೆ. ಅವರನ್ನು ಜ್ಞಾನಿಗಳ ಸರದಿಯಲ್ಲಿ ಕಾಣಲಾಗುತ್ತದೆ. ಆದರೆ, ಇಂದು ಪ್ರಬುದ್ಧ ಪತ್ರಕರ್ತರ ಕೊರತೆ ಎದ್ದು ಕಾಣುತ್ತಿದೆ. ಸ್ವಾರ್ಥ, ಸದುವಿನಯದ ಕೊರತೆ, ಆತ್ಮವಿಶ್ವಾಸದ ಗೌಣ ಎದ್ದು ಕಾಣುತ್ತಿದ್ದು, ಪತ್ರಕರ್ತರನ ನಿಜವಾದ ಧರ್ಮ, ಪರಿಪೂರ್ಣ ಅಧ್ಯಯನಗೈದು ಒಬ್ಬ ಜವಾಬ್ದಾರಿ ಮಾಧ್ಯಮ ಲೋಕವನ್ನು ನಡೆಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕಿದೆ ಎಂದವರು ತಿಳಿಸಿದರು.
ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ನಿಜವಾದ ಪತ್ರಕರ್ತನಾದವನು ತನ್ನ ವೃತ್ತಿಪರತೆಯನ್ನು ಮನಗಾಣಬೇಕು, ವಿಷಯ ವಸ್ತುವನ್ನು ಕರಗತ ಮಾಡಿಕೊಂಡು ವಿಶ್ವಾಸಾರ್ಹ ಬರವಣಿಗೆಯನ್ನು ಮೈಗೂಡಿಸಿಕೊಳ್ಳಬೇಕು. ನಿಸ್ಪಕ್ಷಪಾತ ಸುದ್ದಿ ಪ್ರಚಾರಕ್ಕೆ ಆದ್ಯತೆ ನೀಡುವುದಲ್ಲದೇ ನಿಖರ ಹಾಗೂ ಸ್ಪಷ್ಟ ಬರವಣಿಗೆ ನಮ್ಮ ನಿತ್ಯದ ದ್ಯಯವಾಗಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಕೇಶವ ಕಾರ್ಯ ಸಂವರ್ಧನ ಸಮಿತಿ ಅಧ್ಯಕ್ಷರಾದ ಮಾರೂತಿ ಪಂಚಭಾಯಿ ಮಾತನಾಡಿ, ನಾರದರು ಹಾಗೂ ಇಂದಿನ ಪತ್ರಕರ್ತರಿಗೆ ಅಭಿನಾಭಾವ ಸಂಬಂಧವಿದೆ. ಇಂದು ಬಹಳಷ್ಟು ಪತ್ರಕರ್ತರಿಗೆ ತಮ್ಮ ಕರ್ತವ್ಯದ ಅರಿವಿಲ್ಲ. ಟಿ.ವಿ ಹಾಗೂ ಮೊಬೈಲ್ ಬಳಿಕೆಯಿಂದ ಮಾಧ್ಯಮ ವೃತ್ತಿ ಧರ್ಮಕ್ಕೆ ಹೆಚ್ಚು ಕಳಂಕ ತಂದೊಡ್ಡಿದೆ. ಒಳ್ಳೆಯದಕ್ಕಿಂತ ಇಂದು ಸಾಮಾಜಿಕ ಜಾಲತಾಣ ಹಾಗೂ ಸಾಮಾಜಿಕ ಮಾದ್ಯಮಗಳು ಅನಿಷ್ಟತೆಯನ್ನು ಪ್ರದರ್ಶಿಸಿ ಪತ್ರಕರ್ತರ ಮೇಲಿನ ಗೌರವಕ್ಕೆ ಧಕ್ಕೆ ತಂದಿವೆ. ಅಂಥದರಲ್ಲೂ ಇಂದಿಗೂ ಮುದ್ರಣ ಮಾದ್ಯಮ ತನ್ನ ಪಾವಿತ್ರತೆ ಉಳಿಸಿಕೊಂಡು ಬಂದಿಉರುವುದು ಸಮಾಧಾನಕರ ಸಂಗತಿ ಎಂದರು.
ಆರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಪ್ರಚಾರ ಪ್ರಮುಖರಾದ ಸತೀಶ ಪಾಂಚಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೇಶವ ಕಾರ್ಯ ಸಂವರ್ಧನಾ ಸಮಿತಿ ಕಾರ್ಯದರ್ಶಿ ಎನ್.ಕೃಷ್ನಾರೆಡ್ಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವರು ಪತ್ರಕರ್ತರು ಭಾಗವಹಿಸಿದರು.