ಶಿಕ್ಷಣ, ಜಾನಪದ ತಜ್ಞ  ಎಂ. ಜಿ. ಈಶ್ವರಪ್ಪ ನಿಧನ; ಗಣ್ಯರ ಸಂತಾಪ

ದಾವಣಗೆರೆ.ಜೂ.3:  ಶಿಕ್ಷಣ ತಜ್ಞ, ಜಾನಪದ ತಜ್ಞ, ರಂಗಭೂಮಿ ಸೇರಿದಂತೆ ಎಲ್ಲಾ ವಲಯಗಳಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದ್ದ ಎಂ. ಜಿ. ಈಶ್ವರಪ್ಪ ಅವರು ನಿನ್ನೆ ಸಂಜೆ ೪.೧೦ ಕ್ಕೆ ಬೆಂಗಳೂರಿನಲ್ಲಿ ನಿಧನರಾದರು.ಅವರು ಪತ್ನಿ ಓರ್ವ ಪುತ್ರ,ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗ,ಶಿಷ್ಯವೃಂದವನ್ನು ಬಿಟ್ಟಗಲಿದ್ದಾರೆ.ಎಂ.ಜಿ‌.ಈಶ್ವರಪ್ಪ ಅವರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ಶಾಮನೂರಿನ ರುದ್ರಭೂಮಿಯಲ್ಲಿ ಜರುಗಲಿದೆ.ಎಂ. ಜಿ. ಈಶ್ವರಪ್ಪ ಅವರೆಂದರೆ ಶಿಸ್ತು. ನೇರ ಮಾತು, ಹಿಡಿದ ಕೆಲಸ ಮುಗಿಸುವ ಹಠವಾದಿ. ಯಾವುದೇ ಕ್ಷೇತ್ರವಿರಲಿ, ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದ ಅಪರೂಪದಲ್ಲಿ ಅಪರೂಪ ಎನಿಸುವಂತ ವ್ಯಕ್ತಿತ್ವದ, ಸರಳತೆಯ ಸಾಕಾರಮೂರ್ತಿ. ವಿದ್ಯಾರ್ಥಿಗಳಿಗೆ ಈಶ್ವರಪ್ಪ ಮೇಷ್ಟ್ರು ಅಂದರೆ ಅಷ್ಟೇ ಭಯ, ಪ್ರೀತಿ, ಗೌರವ. ಓದಿ ಹಲವು ವರ್ಷಗಳಾದರೂ ಈಶ್ವರಪ್ಪ ಅವರೆಂದರೆ ತನ್ನಿಂತಾನೆ ಗೌರವ ಬಂದುಬಿಡುತಿತ್ತು.ಎಂ.ಜಿ ಈಶ್ವರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಾಡೋನಹಳ್ಳಿಯವರು. ಆದರೆ, ಇವರು ದಾವಣಗೆರೆಯವರೇ ಆಗಿದ್ದಾರೆ. ಅವರ ಜೀವಮಾನದ ಮುಕ್ಕಾಲು ಭಾಗವನ್ನು ಇಲ್ಲಿಯೇ ಕಳೆದು ದಾವಣಗೆರೆಯ ನೆಚ್ಚಿನ ಮೆಷ್ಟ್ರು ಆಗಿದ್ದಾರೆ.ನಾಟಕ ಅಕಾಡೆಮಿಯ ಅಫಿಲಿಯೇಷನ್ ಪಡೆದಿರುವ ಇವರು ದಾವಣಗೆರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಕಾರ್ಯದರ್ಶಿ, ಉಪಾಧ್ಯಕ್ಷರು, ಅಧ್ಯಕ್ಷರಾಗಿ ಸಕ್ರಿಯ ಪಾತ್ರ, ಅನೇಕ ರಾಷ್ಟ್ರ ಮತ್ತು ರಾಜ್ಯಮಟ್ಟದ ರಂಗನಟನೆ ನಿರ್ದೇಶನ ಕುರಿತಂತೆ ಶಿಬಿರದಲ್ಲಿ ಭಾಗವಹಿಸಿ ಕೇರಳದ ತ್ರಿಚೂರಿನಲ್ಲಿ 2 ತಿಂಗಳ ರಂಗ ತರಬೇತಿ ಪಡೆದಿದ್ದಾರೆ. ಬಿ. ವಿ. ಕಾರಂತರ ಮಾರ್ಗದರ್ಶನದಲ್ಲಿ ಭೂಪಾಲ್ ಮತ್ತು ದೆಹಲಿಯಲ್ಲಿ, ರಂಗಭೂಮಿ ಅಧ್ಯಯನ ಮಾಡಿದ್ದಾರೆ.ಎಂ.ಜಿ ಈಶ್ವರಪ್ಪ ನಿಧನದಿಂದ ಸಾಹಿತ್ಯ ವಲಯಕ್ಕೆ ತುಂಬಲಾರದ ನಷ್ಟವುಂಟಾಗಿದೆ.
ಗಣ್ಯರ ಸಂತಾಪ
ಎಂ.ಜಿ‌ಈಶ್ವರಪ್ಪ ಅವರ ನಿಧನಕ್ಕೆ ಶಾಸಕರಾದ ಶಾಮನೂರು ಶಿವಶಂಕರಪ್ಪ, ಜಿಲ್ಲಾಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್‌, ಪ್ರಭಾ ಮಲ್ಲಿಕಾರ್ಜುನ್‌, ಸಂಸದ ಜಿ.ಎಂ ಸಿದ್ದೇಶ್ವರ್, ಗಾಯತ್ರಿ ಸಿದ್ದೇಶ್ವರ್,ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಸೇರಿದಂತೆ ನಾಡಿನ ಹಿರಿಯ ಸಾಹಿತಿಗಳು,ಚಿಂತಕರು ಸಂತಾಪ ಸೂಚಿಸಿದ್ದಾರೆ.