ಬಿಜೆಪಿ ಗೆಲುವು ನಿಶ್ಚಿತ: ಯಧುವೀರ ಒಡೆಯರ್
ಸಂಜೆವಾಣಿ ನ್ಯೂಸ್
ಮೈಸೂರು.ಜೂ.03:- ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಹತ್ತು ವರ್ಷಗಳ ಆಡಳಿತದಲ್ಲಿ ಅಭಿವೃದ್ಧಿ,ಬಲಿಷ್ಠ ನಾಯಕತ್ವವನ್ನು ಮೆಚ್ಚಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸವಿದ್ದು, ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇದೆ ಎಂದು ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶ್ವಾಸವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಮತ್ತು ಎನ್‍ಡಿಎ ಬಹುಮತ ಗಳಿಸಿಮತ್ತೊಮ್ಮೆ ಅಧಿಕಾರಕ್ಕೆ ಬರುವ ಮುನ್ಸೂಚನೆ ನೀಡಿದೆ. ಹತ್ತು ವರ್ಷಗಳ ಕಾಲದ ಆಡಳಿತದಲ್ಲಿ ಆರ್ಥಿಕತೆ ಚೇತರಿಕೆ ಸೇರಿ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿವೆ. ಪ್ರಧಾನಿ ಮೋದಿ ಬಲಿಷ್ಠ ನಾಯಕತ್ವದ ಆಡಳಿತ ನೀಡಿರುವುದರಿಂದ ಮತ್ತೊಮ್ಮೆ ಜನರು ಆಶೀರ್ವಾದಮಾಡಿರುವುದು ಕಾಣಿಸುತ್ತದೆ ಎಂದರು. ಚುನಾವಣೆಗೂ ಮುನ್ನ ದೇಶದಲ್ಲಿ ಬಿಜೆಪಿ ಪರವಾದ ಅಲೆ ಇದ್ದಿದ್ದು ನೋಡಬಹುದಾಗಿತ್ತು. ಅದೇ ರೀತಿ ಸಮೀಕ್ಷೆಯಲ್ಲೂ ಬಂದಿದೆ. ಸ್ವಲ್ಪ ಸೀಟುಗಳ ವ್ಯತ್ಯಾಸವಾದರೂ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತ ಎಂದರು. ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಐದು ವರ್ಷಗಳ ಕಾಲ ಕ್ಷೇತ್ರದ ಜನರ ಸೇವೆ ಮಾಡುವ ಅವಕಾಶ ದೊರೆಯಲಿದೆ ಎನ್ನುವ ನಂಬಿಕೆ ಇದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಈಗಾಗಲೇ ಕ್ಷೇತ್ರದ ಅಭಿವೃದ್ಧಿಗೆ ಯೋಚಿಸಿರುವಂತೆ ಮುಂದೆ ಮಾಡಲಾಗುವುದು ಎಂದು ಹೇಳಿದರು. ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಅಂತ ಜನರು ಹೇಳುತ್ತಿದ್ದರು. ನಾವು ವಿಶ್ವಾಸ ಇಟ್ಟಿದ್ದೇವೆ. ಈಗ ಮತದಾನೋತ್ತರ ಸಮೀಕ್ಷೆಯಲ್ಲಿ ಮೈಸೂರು ಬಿಜೆಪಿ ಪರವಾಗಿ ಬಂದಿರುವುದು ಸಹಜವಾಗಿ ಅದೇ ತೀರ್ಪುಬರಲಿದೆ ಎಂದರು.