ದೃಷ್ಟಿ ದೋಷ ಸರಿಪಡಿಸಿ ಕೊಂಡರೆ ಜೀವನ ಮತ್ತಷ್ಟು ಸುಂದರ: ಚಂದ್ರ ಪ್ರಭ ಜೈನ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ. 03- ಪಂಚೇಂದ್ರಿಯಗಳಲ್ಲಿ ಕಣ್ಣಿಗೆ ಹೆಚ್ಚಿನ ಮಹತ್ವವಿದ್ದು, 40 ವರ್ಷದ ಬಳಿಕ ಪ್ರತಿಯೊಬ್ಬರು ಕಣ್ಣಿನ ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತ ಜೀವನ ನಡೆಸಲು ಮುಂದಾಗಬೇಕು ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ಚಂದ್ರ ಪ್ರಭ ಜೈನ್ ತಿಳಿಸಿದರು.
ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ರೋಟರಿ ಭವದಲ್ಲಿ ರೋಟರಿ ಸಂಸ್ಥೆ ಹಾಗೂ ಕೊಯಮತ್ತೂರಿನ ಅರವಿಂದ ಕಣ್ಣಾಸ್ರತ್ರೆಯ ಸಹಯೋಗದಲ್ಲಿ ನಡೆದ ಪ್ರತಿ ತಿಂಗಳ ಮೊದಲ ಭಾನುವಾರ ಕಣ್ಣಿನ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರೋಟರಿ ಸಂಸ್ಥೆಯು ಕಳೆದ 50 ವರ್ಷಗಳಿಂದ ನಿರಂತರವಾಗಿ ಕಣ್ಣಿನ ತಪಾಸಣೆ ಶಿಬಿರವನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ. ಪ್ರತಿ ತಿಂಗಳ ಮೊದಲ ಭಾನುವಾರ ಕಣ್ಣಿನ ತಪಾಸಣೆ ಹಾಗೂ ಪೊರೆಯುಳ್ಳವರಿಗೆ ಶಸ್ತ್ರ ಚಿಕಿತ್ಸೆ ಮಾಡುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಾ ಬರಲಾಗಿದೆ. ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸಹಕಾರ ಮಾಡುತ್ತಿರುವುದು ಶಿಬಿರ ಯಶಸ್ವಿಗೆ ಕಾರಣವಾಗಿದೆ ಎಂದರು.
1975 ರಲ್ಲಿ ರೋಟರಿ ಸಂಸ್ಥೆಯಿಂದ ಅಂದಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಪ್ರಥಮವಾಗಿ ಕಣ್ಣಿನ ತಪಾ±ಸಣೆ ಶಿಬಿರವನ್ನು ಆರಂಭಿಸಿದರು. ನಿರಂತರಾಗಿ ನಡೆದುಕೊಂಡು ಬರುತ್ತಿದೆ. ಸಾವಿರಾರು ಮಂದಿ ಕಣ್ಣಿನ ಪೊರೆಯುಳ್ಳುವರು ಶಸ್ತ್ರಚಿಕಿತ್ಸೆ ಮಾಡಿಕೊಂಡು ಮತ್ತೇ ದೃಷ್ಟಿ ಪಡೆದುಕೊಂಡಿದ್ದಾರೆ. ಅನೇಕರು ಕಣ್ಣಿನ ತೊಂದರೆಯಿಂದ ಮುಕ್ತಯನ್ನು ಹೊಂದಿದ್ದಾರೆ. ಹೀಗಾಗಿ ಕಣ್ಣಿನ ಆರೋಗ್ಯ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಒತ್ತಡ ಜೀವನ ಹಾಗೂ ಸದಾ ಕಂಪ್ಯೂಟರ್, ಟವಿ ನೋಡುವುದರಿಂದ ಕಣ್ಣಿನ ತೊಂದರೆ ಕಾಣಿಸಿಕೊಳ್ಳುತ್ತಿವೆ. ಇದನ್ನು ಪ್ರಥಮ ಹಂತದಲ್ಲಿಯೇ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಕನ್ನಡಕ ಹಾಗೂ ಸಲಹೆ ಸೂಚನೆಗಳನ್ನು ಪಡೆದುಕೊಂಡರೆ ಕಣ್ಣಿಗೆ ಅಗುವ ಹಾನಿ ಮತ್ತು ಒತ್ತಡವನ್ನು ತಪ್ಪಿಸಲು ಸಾಧ್ಯವಿದೆ ಎಂದರು.
170 ಮಂದಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆ : ಬಳಿಕ ಕೊಯಮತ್ತೂರು ಅರವಿಂದ ಕಣ್ಣಾಸ್ಪತ್ರೆಯಿಂದ ಆಗಮಿಸಿದ್ದ ತಜ್ಞ ವೈದ್ಯರ ತಂಡ ಕಣ್ಣಿನ ತಪಾಸಣೆ ಆರಂಭಿಸಿ, ಮಧ್ಯಾಹ್ನ 1 ಗಂಟೆಯವರಗೆ 427ಕ್ಕೂ ಹೆಚ್ಚು ಮಂದಿಯ ಕಣ್ಣಿನ ತಪಾಸಣೆ ಮಾಡಿದರು. ಕಣ್ಣಿನ ತೊಂದರೆ ಹಾಗೂ ದೋಷ ವಿದ್ದವರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಕಣ್ಣಿನ ಪೊರೆಯುಳ್ಳ 170 ಮಂದಿಯನ್ನು ಗುರುತಿಸಿ, ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಸೂಚನೆ ಕೊಟ್ಟರು. ಬುಧವಾರ ಈ ಎಲ್ಲರನ್ನೂ ಕೊಯಮತ್ತೂರು ಅರವಿಂದ ಕಣ್ಣಾಸ್ಪತ್ರೆಗೆ ಕರೆದೊಯ್ಯದು ಶಸ್ತ್ರ ಚಿಕಿತ್ಸೆ ಮಾಡಿಸಿ ನಂತರ ಅವರ ಗ್ರಾಮಕ್ಕೆ ಸುರಕ್ಷಿತÀವಾಗಿ ಕರೆದುಕೊಂಡು ಬಿಡಲಾಗುವುದು ಎಂದು ಅಸ್ಪತ್ರೆಯ ಸಂಯೋಜಕ ವಿಜಯಕಾಂತ್ ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ ಅಬ್ದುಲ್ ಅಜೀಜ್ ದೀನಾ, ಹಿರಿಯ ರೋಟರಿಯನ್‍ಗಳಾದ ಜಿ.ಆರ್. ಆಶ್ವಥ್‍ನಾರಾಯಣ್, ಸಿ.ವಿ. ಶ್ರೀನಿವಾಸಶೆಟ್ಟಿ, ಎಲ್ ನಾಗರಾಜು, ಕಾಗಲವಾಡಿಚಂದ್ರು, ಅಂಕಶೆಟ್ಟಿ, ವರ್ಗಿಸ್, ಪಿಆರ್‍ಓ ವಿಜಯಕಾಂತ್ ಮೊದಲಾದವರು ಇದ್ದರು.