ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ಜೂನ್ 3ರಂದು ಮತದಾನಕ್ಕೆ ಅಗತ್ಯ ಸಿದ್ದತೆ: ಜಿಲ್ಲಾಧಿಕಾರಿ ಶಿಲ್ಪಾ ನಾಗ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.03- ಕರ್ನಾಟಕ ವಿಧಾನ ಪರಿಷತ್ತಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮೇ 9ರಂದು ಅಧಿಸೂಚನೆ ಹೊರಡಿಸಲಾಗಿದೆ. ಜೂನ್ 3ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಈ ಸಂಬಂಧ ಅಗತ್ಯ ಸಿದ್ದತೆಗಳನ್ನು ಮಾಡಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಸಿದ್ದತೆಗಳ ಸಂಬಂಧ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳು ಒಳಪಡಲಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 11 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಮತ ಗಟ್ಟೆಯಲ್ಲಿ ಮತದಾರರು ಮತ ಚಲಾಯಿಸಲು ಬ್ಯಾಲೆಟ್ ಪೇಪರ್‍ಗಳನ್ನು ಬಳಸಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗಾಗಿ ಜಿಲ್ಲೆಯಲ್ಲಿ ಒಟ್ಟು 5 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಗುಂಡ್ಲುಪೇಟೆ ಪಟ್ಟಣದ ತಾಲೂಕು ಆಡಳಿತ ಸೌಧಕೊಠಡಿ ಸಂಖ್ಯೆ 17, ಚಾಮರಾಜನಗರ ಪಟ್ಟಣದ ತಾಲೂಕು ಆಡಳಿತ ಸೌಧದ ನೆಲಮಹಡಿಯಲ್ಲಿರುವ ಮೀಟಿಂಗ್ ಹಾಲ್, ಯಳಂದೂರು ಪಟ್ಟಣದ ತಾಲೂಕು ಆಡಳಿತ ಸೌಧದ ನೆಲಮಹಡಿಯಲ್ಲಿರುವ ಕೊಠಡಿ ಸಂಖ್ಯೆ 1ರ ಮಿಟಿಂಗ್ ಹಾಲ್, ಕೊಳ್ಳೇಗಾಲ ಪಟ್ಟಣದ ತಾಲೂಕು ಆಡಳಿತ ಸೌಧದ ನೆಲಮಹಡಿಯಲ್ಲಿರುವ ಕೇಸ್ವಾನ್ ಕೊಠಡಿ ಸಂಖ್ಯೆ 2 ಮತ್ತು ಹನೂರು ತಾಲೂಕಿಗೆ ಸಂಬಂಧ ಪಟ್ಟಂತೆ ಪಶು ವೈದ್ಯಕೀಯ ಆಸ್ಪತ್ರೆ ಸಭಾಂಗಣದಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದರು.
ಅಂತಿಮ ಮತದಾರರ ಪಟ್ಟಿಯಲ್ಲಿ ಗುಂಡ್ಲುಪೇಟೆ ತಾಲೂಕಿನಲ್ಲಿ 306 ಪುರುಷರು, 97 ಮಹಿಳೆಯರು ಸೇರಿದಂತೆ ಒಟ್ಟು 403 ಮತದಾರರು, ಚಾಮರಾಜನಗರ 384 ಪುರುಷರು, 219 ಮಹಿಳೆಯರು ಸೇರಿದಂತೆ ಒಟ್ಟು 603 ಮತದಾರರು, ಯಳಂದೂರು 148 ಪುರುಷರು, 54 ಮಹಿಳೆಯರು ಸೇರಿದಂತೆ ಒಟ್ಟು 202 ಮತದಾರರು, ಕೊಳ್ಳೇಗಾಲ 417 ಪುರುಷರು, 307 ಮಹಿಳೆಯರು ಸೇರಿದಂತೆ ಒಟ್ಟು 724 ಮತದಾರರು ಹಾಗೂ ಹನೂರು ತಾಲೂಕಿನಲ್ಲಿ 193 ಪುರುಷರು, 56 ಮಹಿಳೆಯರು ಸೇರಿದಂತೆ ಒಟ್ಟು 249 ಮತದಾರರಿದ್ದು, ಜಿಲ್ಲೆಯಲ್ಲಿ ಒಟ್ಟು 1448 ಪುರುಷರು, 733 ಮಹಿಳೆಯರು ಸೇರಿದಂತೆ 2181 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಜೂನ್ 2ರಂದು ಮಸ್ಟರಿಂಗ್ ಕಾರ್ಯ ನಡೆದಿದ್ದು, ಜೂನ್ 3ರಂದು ಸಂಜೆ 4.30 ಗಂಟೆಯ ನಂತರಡಿ-ಮಸ್ಟರಿಂಗ್ ಕಾರ್ಯ ನಡೆಯಲಿದೆ. ಪ್ರತಿ ಮತಗಟ್ಟೆಗೆ ಓರ್ವ ಪ್ರಿಸೈಡಿಂಗ್ ಅಧಿಕಾರಿ, ಓರ್ವ ಮತಗಟ್ಟೆ ಅಧಿಕಾರಿ, ಇಬ್ಬರು ಮತದಾನ ಅಧಿಕಾರಿಗಳು, ಓರ್ವ ಮೈಕ್ರೋ ಅಬ್ಸರ್‍ವರ್ ಹಾಗೂ ಕಾಯ್ದಿರಿಸಿದ ಪ್ರಿಸೈಡಿಂಗ್ ಅಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 35 ಮಂದಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ಈಗಾಗಲೇ ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಚುನಾವಣೆ ನೀತಿ ಸಂಹಿತೆ ಪಾಲನೆಗೆ ಪ್ರತೀ ತಾಲೂಕಿಗೆ ಓರ್ವ ಸೆಕ್ಟರ್‍ಅಧಿಕಾರಿ ಮೂವರು ಪ್ಲೈಯಿಂಗ್ ಸ್ಕ್ವಾಡ್ ಹಾಗೂ ಒಬ್ಬರು ಎಂ.ಸಿ.ಸಿ ತಂಡದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಚುನಾವಣೆಗೆ ಪ್ರತಿ ಮತಗಟ್ಟೆಗೆ ಎರಡು ವಾಹನಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಎರಡು ವಾಹನ ಸೇರಿದಂತೆ ಒಟ್ಟು 12 ವಾಹನಗಳನ್ನು ನಿಯೋಜಿಸಲಾಗಿದ್ದು, ಮತಗಟ್ಟೆಗೆ ನೇಮಕ ಮಾಡಿರುವ ಮತಗಟ್ಟೆ ಅಧಿಕಾರಿಗಳು ಮಸ್ಟರಿಂಗ್ ಕೇಂದ್ರಕ್ಕೆ ಹಾಜರಾಗಿ ಮತದಾನಕ್ಕೆ ಅಗತ್ಯವಾದ ಬ್ಯಾಲೆಟ್ ಪೇಪರ್, ಬ್ಯಾಲೆಟ್ ಬಾಕ್ಸ್ ಮತ್ತು ಇನ್ನಿತರೆ ನಮೂನೆಗಳನ್ನು ಮಸ್ಟರಿಂಗ್ ಕೇಂದ್ರದಿಂದ ಪಡೆದು ಆಯಾ ತಾಲ್ಲೂಕು ಕೇಂದ್ರದಲ್ಲಿ ತೆರೆಯಲಾಗಿರುವ ಮತಗಟ್ಟೆಗೆ ಪೆÇಲೀಸ್ ಎಸ್ಕಾರ್ಟ್‍ನೊಡನೆ ತೆರಳಲಿದ್ದಾರೆ ಎಂದರು.
ಜೂನ್ 3ರಂದು ಮತದಾನ ಮುಕ್ತಾಯದ ಬಳಿಕ ಮತಪತ್ರಗಳು ತುಂಬಿದ ಮತಪೆಟ್ಟಿಗೆಯನ್ನು ಪೆÇಲೀಸ್ ಎಸ್ಕಾರ್ಟ್‍ನೊಡನೆ ಕಂಟೈನರ್ ವಾಹನದಲ್ಲಿ ಡಿ ಮಸ್ಟರಿಂಗ್ ಕೇಂದ್ರವನ್ನು ತಲುಪಿಸಲಾಗುತ್ತದೆ. ಡಿ ಮಸ್ಟರಿಂಗ್ ಕಾರ್ಯ ಮುಕ್ತಾಯವಾದ ನಂತರ ಜಿಲ್ಲೆಯಲ್ಲಿ ಮತದಾನವಾದ 5 ಮತಗಟ್ಟೆಗಳ ಮತ ಪತ್ರತುಂಬಿದ ಮತ ಪೆಟ್ಟಿಗೆಗಳು ಮತ್ತು ಮತದಾನದ ದಾಖಲೆಗಳನ್ನು ಪೆÇಲೀಸ್ ಎಸ್ಕಾರ್ಟ್‍ನೊಡನೆ ಕಂಟೇನರ್ ವಾಹನದಲ್ಲಿ ಮೈಸೂರಿನಲ್ಲಿ ಸ್ಥಾಪಿಸಲಾಗಿರುವ ಎಣಿಕೆ ಕೇಂದ್ರಕ್ಕೆ ತಲುಪಿಸಿ, ಮತ ಪತ್ರ ತುಂಬಿದ ಮತ ಪೆಟ್ಟಿಗೆಗಳು ಮತ್ತು ದಾಖಲೆಗಳನ್ನು ಚುನಾವಣಾಧಿಕಾರಿಗಳ ಸುಪರ್ದಿಗೆ ವಹಿಸಲಾಗುತ್ತದೆ. ಜೂನ್ 6ರಂದು ಮೈಸೂರಿನಲ್ಲಿ ಸ್ಥಾಪಿಸಲಾಗಿರುವ ಎಣಿಕೆ ಕೇಂದ್ರದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯವನ್ನು ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಇತರರು ಪತ್ರಿಕಾ ಗೋಷ್ಠಿಯಲ್ಲಿ ಇದ್ದರು. ಪತ್ರಿಕಾ ಗೋಷ್ಠಿ ಬಳಿಕ ಜಿಲ್ಲಾಧಿಕಾರಿಯವರು ಜಿಲ್ಲಾಡಳಿತ ಭವನದ ಅವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣಕ್ಕೆ ಭೇಟಿ ನೀಡಿ ಅಲ್ಲಿನಡೆಯುತ್ತಿದ್ದ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮಸ್ಟರಿಂಗ್ ಕಾರ್ಯವನ್ನು ವೀಕ್ಷಿಸಿದರು.
ಚುನಾವಣೆಯ ಮತದಾನಕ್ಕಾಗಿ ಸಿದ್ದತೆಗಳು, ಪೋಸ್ಟಲ್ ಬ್ಯಾಲೆಟ್ ಪೇಪರ್‍ಗಳು ಮತದಾನದ ಪೆಟ್ಟಿಗೆಗಳು, ಮತದಾನಕ್ಕೆ ಅಗತ್ಯವಾದ ಪರಿಕರಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳಾದ ಶಿಲ್ಪಾ ನಾಗ್ ಅವರು ಮಸ್ಟರಿಂಗ್ ಪ್ರಕ್ರಿಯೆಯಲ್ಲಿ ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಕಾರ್ಯ ನಿರ್ವಹಿಸುವಂತೆ ಮಸ್ಟರಿಂಗ್ ಅಧಿಕಾರಿಗಳಿಗೆ ಸೂಚಿಸಿ, ಅಗತ್ಯ ಸಲಹೆಗಳನ್ನು ನೀಡಿದರು.