ವಿವಿಧ ಪ್ರಮಾಣ ಪತ್ರಗಳ ಸೇವೆ ರಾಜ್ಯದಲ್ಲೇ ನಂಬರ್ 1
ಕೋಲಾರ ಜೂ ೩-ಕೋಲಾರ ಜಿಲ್ಲಾಡಳಿತವು ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವುದನ್ನು ಸಾಬೀತು ಪಡಿಸುವ ಮೂಲಕ ಸತತವಾಗಿ ಕಳೆದ ೪ ತಿಂಗಳುಗಳಿಂದ ಅಟಲ್ ಜೀ ಜನಸ್ನೇಹಿ ಕೇಂದ್ರದ ಕಾರ್ಯ ಸಾಧನೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಕಾಯ್ದುಕೊಂಡಿದೆ .
ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ಜಿಲ್ಲೆಯ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ಸೇವೆಯನ್ನು ನೀಡುವ ಮೂಲಕ ಉತ್ತಮ ಸಾಧನೆ ಮಾಡಿದೆ. ಸಿಲ್ಕ್ ಸಿಟಿ,ಮಿಲ್ಕ್ ಸಿಟಿ ಗೋಲ್ಡನ್ ಸಿಟಿ ಇದೀಗ ಅರ್ಜಿ ವಿಲೇವಾರಿಯಲ್ಲಿಯು ಹೆಸರು ಮಾಡಿರುವುದು ವಿಶೇಷವಾಗಿದೆ.
ಅಂದಹಾಗೇ ಕೋಲಾರ ಜಿಲ್ಲೆಯ ನಾಡಕಚೇರಿಗಳಲ್ಲಿ ಮೇ ೨೦೨೪ ರಿಂದ ತಿಂಗಳಿನಲ್ಲಿ ಸ್ವೀಕರಿಸಲಾಗಿರುವ ೨೪೬೭೪ ಅರ್ಜಿಗಳನ್ನು ನಿಗದಿತ ಅವಧಿಗಿಂತ ಮೊದಲೇ ಶೇ.೯೯ರಷ್ಟು ವಿಲೇವಾರಿ ಮಾಡುವ ದಾಖಲೆ ಬರೆದಿದೆ. ಈ ಮೂಲಕ ೫.೧ಸಿಗ್ಮಾ ಮೌಲ್ಯವನ್ನು ಪಡೆದಿದ್ದು, ವಿಲೇವಾರಿ ಸೂಚ್ಯಂಕದ ಪ್ರಕಾರ ಕೋಲಾರ ೬ ಪಟ್ಟು ನಿಗದಿತ ಅವಧಿಗಿಂತ ಮೊದಲೇ ವಿಲೇವಾರಿ ಮಾಡಿ ಸತತವಾಗಿ ನಾಲ್ಕನೇ ಬಾರಿ ರಾಜ್ಯದಲ್ಲೇ ನಂಬರ್ ೧ ಆಗಿದೆ.
ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯು ನಾಗರಿಕರಿಗೆ ವಿವಿಧ ಸೇವೆಗಳನ್ನು ಅಟಲ್ ಜೀ ಜನಸ್ನೇಹಿ ಕೇಂದ್ರಗಳ (ನಾಡಕಚೇರಿ) ಮೂಲಕ ಸುಲಭವಾಗಿ ತಲುಪಿಸುವ ಗುರಿಯನ್ನು ಹೊಂದಿದೆ. ಅಲ್ಲದೇ ಜಾತಿ ಮತ್ತು ಆದಾಯ, ಭೂಮಿ ಮತ್ತು ಕೃಷಿಕರಿಗೆ ಸಂಬಂಧಿಸಿದ ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಳು, ಜಾತಿ-ಆದಾಯ ಪ್ರಮಾಣ ಪತ್ರ, ಪಡಿತರ ತಿದ್ದುಪಡಿ, ಪಹಣಿ, ಮ್ಯೂಟೇಷನ್, ಆಧಾರ್ ಅರ್ಜಿ, ತಿದ್ದುಪಡಿ ಸೇರಿದಂತೆ ೨೫ಕ್ಕೂ ಹೆಚ್ಚಿನ ಸೇವೆಗಳನ್ನು ಒದಗಿಸುತ್ತಿದೆ.
ಕೋಲಾರ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿರುವ ಬಗ್ಗೆ ಕೋಲಾರ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ಎಲ್ಲಾ ಅಧಿಕಾರಿ ಸಿಬ್ಬಂದಿಗೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಇದೇ ಮಾದರಿಯಲ್ಲಿ ಸರ್ಕಾರಿ ಯೋಜನೆಗಳು ನಿಗದಿತ ಅವಧಿಗೂ ಮುನ್ನ ಸಾರ್ವಜನಿಕರಿಗೆ ಸೇವೆ ನೀಡಲಿ ಎಂದು ತಿಳಿಸಿದ್ದಾರೆ.