ನುಡಿದಂತೆ ನಡೆದ ಕೇಂದ್ರ ಸಚಿವ ಖೂಬಾ : ಮರಾಠಾ ಸಮಾಜ ಹರ್ಷಪರಿಷತ್ ಬಿಜೆಪಿ ಅಭ್ಯರ್ಥಿಯಾಗಿ ಎಂ.ಜಿ ಮುಳೆ
ಸಂಜೆವಾಣಿ ವಾರ್ತೆ
ಬೀದರ : ಜೂ.3:ವಿಧಾನಸಭೆಯಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಜಿಲ್ಲೆಯ ಮರಾಠ ಸಮಾಜದ ಹಿರಿಯ ಮುಖಂಡ ಮಾರುತಿರಾವ್ ಮುಳೆ ಅವರನ್ನು ಆಯ್ಕೆ ಮಾಡಲಾಗಿದ್ದು, ಕೇಂದ್ರ ಸಚಿವ ಭಗವಂತ ಖೂಬಾ ನುಡಿದಂತೆ ನಡೆದಿದ್ದಾರೆ ಎಂದು ಮರಾಠಾ ಸಮಾಜ ಮುಖಂಡ ದೀಪಕ ಪಾಟೀಲ ಚಾಂದೋರಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಮುಂಚೆ ಲೋಕಸಭೆ ಚುನಾವಣೆಗೆ ಮುನ್ನ ನಡೆದಿದ್ದ ಮರಾಠ ಸಮಾಜದ ಮುಖಂಡರ ಸಭೆಯಲ್ಲಿ ಭಗವಂತ ಖೂಬಾ ಅವರು ಸಮಾಜದ ಮುಖಂಡರೊಬ್ಬರಿಗೆ ವಿಧಾನ ಪರಿಷತ್ತಿನಲ್ಲಿ ಸ್ಥಾನ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಕೊಟ್ಟ ಮಾತಿನಂತೆ ಕೆಲವೇ ತಿಂಗಳಲ್ಲಿ ಅದನ್ನು ಈಡೇರಿಸುವ ಮೂಲಕ ಮರಾಠಾ ಸಮಾಜದವರ ಬಗ್ಗೆ ಕಾಳಜಿ ಇರುವುದನ್ನು ನಿರೂಪಿಸಿದ್ದಾರೆ.
ಕೆಲವರು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಸಮಾಜದ ಮುಖಂಡರ ಹಾದಿ ತಪ್ಪಿಸುವ ಕೆಲಸ ಮಾಡಿ, ಬೇರೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೇಂದ್ರ ಸಚಿವರ ಭರವಸೆ ಬಗ್ಗೆ ಲಘುವಾಗಿ ಮಾತನಾಡಿದ್ದರು. ಅಂಥವರ ಮಾತನ್ನು ಲೆಕ್ಕಿಸದೆ ಖೂಬಾ ಅವರು ತಾವು ಕೊಟ್ಟ ಮಾತನ್ನು ನಡೆಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಖೂಬಾ ಅವರಿಗೆ ಮರಾಠ ಸಮಾಜದ ಬಗ್ಗೆ ವಿಶೇಷ ಕಾಳಜಿ ಇದೆ. ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ವಿಧಾನ ಪರಿಷತ್ತಿನಲ್ಲೂ ಸಮಾಜದ ಮುಖಂಡರಿಗೆ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಮರಾಠ ಸಮಾಜ ಸಹ ಖೂಬಾ ಅವರನ್ನು ಬೆಂಬಲಿಸುತ್ತ ಬಂದಿದೆ. ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲೂ ಅವರ ಕೈಹಿಡಿದಿದೆ ಎಂದು ತಿಳಿಸಿದ್ದಾರೆ.ಸಮಾಜ ಪರ ಕಾಳಜಿಯಿಂದ ಮರಾಠ ಸಮಾಜದಲ್ಲಿ ಖೂಬಾ ಅವರ ಗೌರವ ಇನ್ನಷ್ಟು ಹೆಚ್ಚಿದೆ ಎಂದು ಹೇಳಿದ್ದಾರೆ.
ಮುಳೆ ಅವರನ್ನು ಪರಿಷತ್ ಅಭ್ಯರ್ಥಿಯನ್ನಾಗಿಸಿರುವುದು ಮರಾಠ ಸಮಾಜಕ್ಕೆ ಸಂತಸ ಉಂಟು ಮಾಡಿದೆ. ಇದಕ್ಕಾಗಿ ಕೇಂದ್ರ ಸಚಿವ ಖೂಬಾ ಹಾಗೂ ಬಿಜೆಪಿ ನಾಯಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಬರುವ ದಿನಗಳಲ್ಲಿ ಸಮಾಜದ ಮುಖಂಡರ ಸಭೆ ಕರೆದು, ಖೂಬಾ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದು ದೀಪಕ ಪಾಟೀಲ ಚಾಂದೋರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.