ಅಧಿಕೃತ ಮಾರಾಟಗಾರರಿಂದ ಮಾತ್ರ ಬಿತ್ತನೆ ಬೀಜ ಖರೀದಿಸಿ:ರಾಜಕುಮಾರ
ಸೈದಾಪುರ:ಜೂ.3:ಅಧಿಕೃತ ಮಾರಾಟಗಾರರಿಂದ ಮಾತ್ರ ಬಿತ್ತನೆ ಬೀಜಗಳನ್ನು ಖರೀದಿಸುವಂತೆ ಸಹಾಯಕ ಕೃಷಿ ನಿರ್ಧೇಶಕರಾದ ರಾಜುಕುಮಾರ ರೈತರಿಗೆ ಸಲಹೆ ನೀಡಿದರು.
ಸಮೀಪದ ತೆಲಂಗಾಣ ಗಡಿ ಭಾಗದ ಗ್ರಾಮಗಳಾದ ನಸಲವಾಯಿ, ಕುಂಟಿಮರಿ, ಗುರನೂರ, ಜೈಗ್ರಾಮ, ಕರಣಗಿ ಗ್ರಾಮಗಳಲ್ಲಿ ಸಹಾಯಕ ಕೃಷಿ ನಿರ್ಧೇಶಕರು ಹಾಗೂ ಕೊಂಕಲ ಕೃಷಿ ಅಧಿಕಾರಿಗಳ ತಂಡದೊಂದಿಗೆ ಗುಣಮಟ್ಟದ ಹತ್ತಿ ಬಿತ್ತನೆ ಬೀಜಗಳನ್ನು ಖರೀದಿಸುವಂತೆ ಮತ್ತು ಅನಧಿಕೃತ ಮಾರಾಟಗಾರರು ಬೀಜ ಮಾರಾಟ ಮಾಡುವುದು ಕಂಡು ಬಂದಲ್ಲೆ ತಕ್ಷಣೆವೇ ಇಲಾಖೆಗೆ ದೂರು ನೀಡುವಂತೆ ರೈತರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಇಲಾಖೆಗೆ ದೂರು ನೀಡಬೇಕು. ಬೀಜಗಳನ್ನು ಖರೀದಿಸಿದ ನಂತರ ಕಡ್ಡಾಯವಾಗಿ ರಶೀದಿಗಳನ್ನು ಪಡೆಯಬೇಕು. ಪ್ಯಾಕಿಂಗ್ ಮತ್ತು ಲೇಬಲಿಂಗ್ ಇಲ್ಲದ ಹತ್ತಿ ಬೀಜ ಸೇರಿದಂತೆ ಇತರೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಮಾರಾಟ ಮಾಡುವವರು ಕಂಡು ಬಂದರೆ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮಾಹಿತಿ ನೀಡುವಂತೆ ರೈತರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಮೈಪಾಲರೆಡ್ಡಿ, ಉಪ ಯೋಜನಾ ನಿರ್ಧೇಶಕರಾದ ಡಾ.ಹೊನ್ನಯ್ಯ, ರೈತರು, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.