ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ:ಮಸ್ಟರಿಂಗ್ ಕೇಂದ್ರಕ್ಕೆ ಆರ್.ಸಿ-ಡಿ.ಸಿ. ಭೇಟಿ,ಪರಿಶೀಲನೆ
ಕಲಬುರಗಿ:ಜೂ.2: ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಗೆ ಸೋಮವಾರ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಭಾನುವಾರ ಕಲಬುರಗಿ ನಗರದಲ್ಲಿ ನಡೆದ ಮಸ್ಟರಿಂಗ್ ಕೇಂದ್ರಗಳಿಗೆ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಲಬುರಗಿ ಮಹಾನಗರ ಪಾಲಿಕೆ ಮತ್ತು ಕಲಬುರಗಿ ತಹಶೀಲ್ದಾರ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮಸ್ಟರಿಂಗ್ ಕಾರ್ಯ ವೀಕ್ಷಿಸಿದರು. ಮಹಾನಗರ ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ ಅವರಿಂದ‌ ಮಸ್ಟರಿಂಗ್ ಕಾರ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.
ನಂತರ ಕಲಬುರಗಿ ತಹಶೀಲ್ದಾರ ಕಚೇರಿಯಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂ. 32, 32/ಎ ಭೇಟಿ ನೀಡಿ ಮತಗಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯ ಕಲ್ಪಿಸಿರುವ ಬಗ್ಗೆ ಖುದ್ದಾಗಿ ಪರಿಶೀಲಿಸಿದರು. ಕಲಬುರಗಿ ತಹಶೀಲ್ದಾರ ಮಧುರಾಜ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ಕೃಷ್ಞ ಭಾಜಪೇಯಿ ಅವರು, ಹಳೇ ಎಸ್.ಪಿ. ಕಚೇರಿ ಎದುರಿಗಿರುವ ಸರ್ಕಾರಿ ಪಿ.ಯು. ಕಾಲೇಜು ಮತಗಟ್ಟೆ ಸಂ.26 ಹಾಗೂ ಜಯನಗರ ಸರ್ಕಾರಿ ಹಿ.ಪ್ರಾ.ಶಾಲೆ ಮತಗಟ್ಟೆ ಸಂ.22ಕ್ಕೆ‌ ಭೇಟಿ ನೀಡಿದರು.
ಗುಲಬರ್ಗಾ ವಿ.ವಿ. ಸ್ಟ್ರಾಂಗ್ ರೂಂಗೂ ಭೇಟಿ:
ಇದೇ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ಚುನಾವಣೆ ನಂತರ ಪೋಸ್ಟಲ್ ಬಾಕ್ಸ್ ಇರಿಸಲಾಗುವ ಗುಲಬರ್ಗಾ ವಿ.ವಿ.ಯ ಸ್ಟ್ರಾಂಗ್ ರೂಂಗೆ ಭೇಟಿ ನೀಡಿ ಅಲ್ಲಿ ಕೈಗೊಳ್ಳಲಾಗುತ್ತಿರುವ ಸಿದ್ಧತಾ ಕೆಲಸ ಸಹ ವೀಕ್ಷಿಸಿದರು.
ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಮೀನಾಕ್ಷಿ ಆರ್ಯ ಇದ್ದರು.