10 ರೂ. ನಾಣ್ಯಗಳು ಕಾನೂನು ಬದ್ಧವಾಗಿ ಚಲಾವಣೆಯಲ್ಲಿವೆ:ಡಿ.ಸಿ. ಬಿ.ಫೌಜಿಯಾ ತರನ್ನುಮ್
ಕಲಬುರಗಿ:ಜೂ.2: ಹತ್ತು ರೂಪಾಯಿಗಳ ನಾಣ್ಯಗಳು ಕಾನೂನು ಬದ್ಧವಾಗಿ ಚಲಾವಣೆಯಲ್ಲಿವೆ. ಸಾರ್ವಜನಿಕರು, ವ್ಯಾಪಾರಿಗಳು, ಉದ್ಯೋಗಿಗಳು, ಬ್ಯಾಂಕ್‍ಗಳು ಹಾಗೂ ಜನಸಾಮಾನ್ಯರು 10 ರೂ.ಗಳ ನಾಣ್ಯಗಳನ್ನು ಚಲಾವಣೆ ಮಾಡಲು ಬಳಸಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಬ್ಯಾಂಕಿನ ಸಿಬ್ಬಂದಿ ವರ್ಗದವರು ಹಾಗೂ ಬ್ಯಾಂಕುಗಳು 10 ರೂ. ನಾಣ್ಯಗಳು ಸ್ವೀಕರಿಸಬೇಕು ಹಾಗೂ ಜನ ಸಾಮಾನ್ಯರಿಗೆ ನೀಡಬೇಕು. ಸಾರ್ವಜನಿಕ ವಹಿವಾಟಿನ ಅಗತ್ಯ ಪೂರೈಸುವ ಸಲುವಾಗಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ವಿಷಯಗಳೊಂದಿಗೆ ವಿಶಿಷ್ಟ ಲಕ್ಷಣಗಳುಳ್ಳ ನಾಣ್ಯಗಳನ್ನು ಆರ್.ಬಿ.ಐ. ಹೊರತಂದಿದೆ. ನಾಣ್ಯಗಳಾದ 1 ರೂ., 2 ರೂ., 5 ರೂ., 10 ರೂ. ಹಾಗೂ 20 ರೂಪಾಯಿಗಳ ಮುಖ ಬೆಲೆಯ ನಾನಾ ಗಾತ್ರ ಮತ್ತು ವಿನ್ಯಾಸದ ನಾಣ್ಯಗಳು ಚಲಾವಣೆಯಲ್ಲಿವೆ ಎಂದಿದ್ದಾರೆ.
ನಾಣ್ಯ ಸ್ವೀಕರಿಸಿದ್ದರೆ ಶಿಕ್ಷೆ: ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದ ಪ್ರಕಾರ ಯಾರಾದರೂ ಒಂದು ವೇಳೆ 10 ರೂ. ನಾಣ್ಯಗಳು ಸ್ವೀಕರಿಸದೇ ಹೋದಲ್ಲಿ ನಾಣ್ಯ ಕಾಯ್ದೆ-2011ರ ಸೆಕ್ಷನ್ 6(1)ರ ಉಲ್ಲಂಘನೆಯಾಗಲಿದ್ದು, ಕಾಯ್ದೆಯನ್ವಯ ಶಿಕ್ಷೆಗೆ ಅರ್ಹರಾಗುತ್ತಾರೆ. ನಾಣ್ಯ ಕಾಯ್ದೆ-2011ರಲ್ಲಿ ಒದಗಿಸಿದಂತೆ ಎಲ್ಲಾ ನಾಣ್ಯಗಳು ಕಾನೂನುಬದ್ದವಾಗಿ ಚಲಾವಣೆಯಲ್ಲಿರುತ್ತದೆ. ಅಲ್ಲದೆ ಅಸ್ತಿತ್ವದಲ್ಲಿರುವ ಎಲ್ಲಾ ನಾಣ್ಯಗಳು ಕಾನೂನುಬದ್ಧವಾಗಿ ಮುಂದುವರೆಯುತ್ತವೆ ಎಂದಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಸುತ್ತೋಲೆ ದಿ.02.07.2012ರ ಪ್ರಕಾರ ಎಲ್ಲಾ ನೋಟುಗಳು (ಹಾಳಾದ/ ವಿಕೃತವಾದ/ ಹರಿದ) ಮತ್ತು ಹಾಳಾದ ನಾಣ್ಯಗಳನ್ನು ಬ್ಯಾಂಕಿನಿಂದ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.