ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ:ಮತ ಚಲಾಯಿಸುವಂತೆ ಮತದಾರರಲ್ಲಿ ಚುನಾವಣಾಧಿಕಾರಿ ಕೃಷ್ಣಾ ಭಾಜಪೇಯಿ ಮನವಿ
ಕಲಬುರಗಿ:ಜೂ.2: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಇದೇ ಜೂನ್ 3 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೂ ಮತದಾನ ನಡೆಯಲಿದ್ದು, ಕ್ಷೇತ್ರದಾದ್ಯಂತ ಮತದಾರರು ಮತಗಟ್ಟೆಗೆ ಬಂದು ತಪ್ಪದೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕೆಂದು ಕ್ಷೇತ್ರದ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ಮತದಾರ ಪ್ರಭುಗಳಲ್ಲಿ ಮನವಿ ಮಾಡಿದ್ದಾರೆ.
ಕ್ಷೇತ್ರದಾದ್ಯಂತ 99,121 ಪುರುಷರು, 57,483 ಮಹಿಳೆಯರು, ಇತರೆ 19 ಸೇರಿ ಒಟ್ಟು 1,56,623 ಜನ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದು, ಕಲಬುರ್ಗಿ ವಿಭಾಗದ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವ್ಯಾಪ್ತಿ ಹೊಂದಿರುವ ಈ ಕ್ಷೇತ್ರದಲ್ಲಿ 160 ಮುಖ್ಯ ಮತ್ತು 35 ಹೆಚ್ಚುವರಿ ಸೇರಿ ಒಟ್ಟು 195 ಮತಗಟ್ಟೆ ಸ್ಥಾಪಿಸಿಲಾಗಿದೆ. ಪ್ರತಿ ಮತಗಟ್ಟೆಗೆ ಓರ್ವ ಪಿ.ಆರ್.ಓ, ಓರ್ವ ಎ.ಪಿ.ಆರ್.ಓ, ಇಬ್ಬರು ಪಿ.ಓ., ಮೈಕ್ರೋ ವೀಕ್ಷಕರು ಒಬ್ಬರು, ಓರ್ವ ಗ್ರೂಪ್ ‘ಡಿ’ ಸಿಬ್ಬಂದಿ ಸೇರಿ ಒಟ್ಟು 6 ಜನ ಸಿಬ್ಬಂದಿ ಇರಲಿದ್ದು, ಸೂಕ್ತ ಪೊಲೀಸ್ ಭದ್ರತೆ ಸಹ ಒದಗಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯ ಖಾತ್ರಿಪಡಿಸಿಕೊಳ್ಳಲಾಗಿದೆ ಎಂದರು.
ಸಾಮಾನ್ಯವಾಗಿ ವಿಧಾನಸಭೆ, ಲೋಕಸಭೆ ಚುನಾವಣೆಗಳು ಇ.ವಿ.ಎಂ. ಮತಯಂತ್ರಗಳ ಮೂಲಕ ಮತ ಚಲಾಯಿಸಲಾಗುತ್ತಿದೆ. ಇಲ್ಲಿ ಪೋಸ್ಟಲ್ ಬ್ಯಾಲೆಟ್ ಮೂಲಕ ಪ್ರಾಶಸ್ತ್ಯದ ಮತ ನೀಡಲು ಅವಕಾಶವಿದ್ದು, ಸಾಮಾನ್ಯ ಚುನಾವಣೆಗ್ಗಿಂತ ಇದು ಭಿನ್ನವಾಗಿದೆ. ಮತದಾನ ಕೇಂದ್ರದಲ್ಲಿ ಚುನಾವಣಾ ಆಯೋಗವು ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ನಿನಿಂದ ಮಾತ್ರ ಆದ್ಯತಾ ಮತಗಳನ್ನು ಸಂಖ್ಯಾತ್ಮಕವಾಗಿ ನಮೂದಿಸಬೇಕು. ಆದ್ಯತಾ ಸಂಖ್ಯೆ ನಮೂದಿಸುವಾಗ ಒಂದೇ ಭಾಷೆ ಬಳಸಬೇಕು. ಅಕ್ಷರದಲ್ಲಿ ಬರೆಯಬಾರದು. ಸ್ಕೆಚ್ ಪೆನ್ ಹೊರತುಪಡಿಸಿ ಇತರೆ ಪೆನ್ ಬಳಸಿ ಮತ ಚಲಾಯಿಸಿದಲ್ಲಿ ಅಂತಹ ಮತಗಳು ಅಸಿಂಧುಗೊಳ್ಳಲಿದೆ. ಇನ್ನು ಈ ಚುನಾವಣೆಯಲ್ಲಿ ನೋಟಾ (NOTA) ಅನ್ವಯಿಸದ ಕಾರಣ ಮತಪತ್ರದಲ್ಲಿ ಇದನ್ನು ಮುದ್ರಿಸಿರುವುದಿಲ್ಲ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಪರ್ಯಾಯ ದಾಖಲೆಗಳಿದ್ದರೆ ಸಾಕು: ಚುನಾವಣಾ ಗುರುತಿನ ಚೀಟಿ ಇಲ್ಲದ ಸಂದರ್ಭದಲ್ಲಿ ಮತದಾರರು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಇಂಡಿಯನ್ ಪಾಸ್‍ಪೋರ್ಟ್, ರಾಜ್ಯ-ಕೇಂದ್ರ ಸರ್ಕಾರ ಮತ್ತು ನಿಗಮ-ಮಂಡಳಿ ಹಾಗೂ ಸಾರ್ವಜನಿಕ ಉದ್ದಿಮೆಗಳು ಉದ್ಯೋಗಿಗಳಿಗೆ ವಿತರಿಸಿರುವ ಭಾವಚಿತ್ರವುಳ್ಳ ಗುರುತಿನ ಚೀಟಿ, ಶಿಕ್ಷಣ ಸಂಸ್ಥೆಗಳಿಂದ ಉದ್ಯೋಗಿಗಳಿಗೆ ವಿತರಿಸಿದ ಸೇವಾ ಕಾರ್ಡ್, ವಿಶ್ವವಿದ್ಯಾಲಯದಿಂದ ನೀಡಲಾದ ಪದವಿ-ಡಿಪ್ಲೋಮಾ ಪ್ರಮಾಣ ಪತ್ರ, ಭಾರತ ಸರ್ಕಾರದಿಂದ ನೀಡಲಾದ ಯು.ಐ.ಡಿ. ಕಾರ್ಡ್ ತೋರಿಸಿ ಮತ ಚಲಾಯಿಸಬಹುದಾಗಿದೆ.