ಎಂ ಜಿ ಈಶ್ವರಪ್ಪ ಹೆಸರಲ್ಲಿ  ಜಾನಪದ ಅಧ್ಯಯನ ಕೇಂದ್ರ  ನಿರ್ಮಾಣವಾಗಲಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨; ದಾವಣಗೆರೆಯ ಹೆಸರಾಂತ ಹಿರಿಯ ಸಾಹಿತಿ, ಚಿಂತಕರು, ಜಾನಪದ ತಜ್ಞರು, ಬಾಪೂಜಿ ವಿದ್ಯಾ ಸಂಸ್ಥೆಯ ನಿರ್ದೇಶಕರು  ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರು ಶ್ರೀಯುತ ಎಂ.ಜಿ.ಈಶ್ವರಪ್ಪನವರ ನಿಧನ ದಾವಣಗೆರೆ ಸಾಂಸ್ಕೃತಿಕ ವಲಯಕ್ಕೆ ತುಂಬಲಾರದ ನಷ್ಟ  ಎಂದು ದಾವಣಗೆರೆ ತಿಂಗಳ ಅಂಗಳ ಸಾಹಿತ್ಯ ಸಾಂಸ್ಕೃತಿಕ ಬಳಗದ ಸಂಚಾಲಕ ಗಂಗಾಧರ ಬಿ ಎಲ್ ನಿಟ್ಟೂರ್ ಕಂಬನಿ ಮಿಡಿದಿದ್ದಾರೆ. ಸದಾ ಹಸನ್ಮುಖಿಯಾಗಿದ್ದ ಅವರ ಗಾಂಭೀರ್ಯ, ಹಿರಿ ಕಿರಿಯರ ಜೊತೆ ಬೆರೆಯುತ್ತಿದ್ದ ರೀತಿ, ನೀಡುತ್ತಿದ್ದ ಮಾರ್ಗದರ್ಶನ ಮಾದರಿ ಹಾಗೂ ಅನುಕರಣೀಯ ಎಂದು ಸ್ಮರಿಸಿರುವ ಗಂಗಾಧರ್ ಶ್ರೀಯುತರ ಜೀವನಾದರ್ಶವನ್ನು ಪರಿಚಯಿಸುವ ಅಭಿನಂದನಾ ಗ್ರಂಥವನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೊರ ತರಲಿ ಹಾಗೂ ಅವರ ಹೆಸರಲ್ಲಿ ಒಂದು ಜಾನಪದ ಅಧ್ಯಯನ ಕೇಂದ್ರ ಅಥವಾ ಲೈಬ್ರರಿ ನಿರ್ಮಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಲಿ ಎಂದು ಆಶಿಸಿದ್ದಾರೆ.