ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ನಮ್ಮ ಸಂಸ್ಕøತಿ ಉಳಿಸಬೇಕಿದೆ: ಗಂಗಾಧರೇಂದ್ರ ಸರಸ್ವತಿ ಶ್ರೀ
ವಿಜಯಪುರ,ಸೆ.24 : ಮನುಷ್ಯನ ಅಪಕ್ವತೆಯ ಮನಸ್ಸು ಇಂದು ವಿಕೃತಿಯತ್ತ ಸಾಗುತ್ತಿದೆ. ಭಯೋತ್ಪಾದನೆ, ಅತ್ಯಾಚಾರ, ಕೊಲೆ, ಸುಲಿಗೆ ಮುಂತಾದ ಭಯಂಕರವಾದ ಕೃತ್ಯಗಳನ್ನು ಮಾಡುತ್ತಿದೆ. ಇದನ್ನು ಕೊನೆಗಾಣಿಸಲು ಎಲ್ಲರೂ ಒಂದಾಗುವ ಮೂಲಕ ನಮ್ಮ ಸಂಸ್ಕøತಿಯನ್ನು ಉಳಿಸಿ, ಬೆಳೆಸಿ, ಸುಭದ್ರ ರಾಷ್ಟ್ರ ನಿರ್ಮಾಣ ಮಾಡಬೇಕಿದೆ ಎಂದು ಸ್ವರ್ಣವಲ್ಲಿ ಮಹಾಸಂಸ್ಥಾನದ ಪೀಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.
ನಗರದ ಉಕ್ಕಲಿ ರಸ್ತೆಯ ಪಂಡಿತ ಶ್ರೀ ರುಕ್ಮಾಂಗದ ಕಲ್ಯಾಣ ಮಂಟಪದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗವದ್ಗೀತೆ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿ,
ಈ ಕಾರಣಕ್ಕಾಗಿ ಉದಾತ್ತ ಚಿಂತನೆ ಮೂಡಿಸಲು ಈ ಅಭಿಯಾನ ಆಯೋಜಿಸಲಾಗಿದೆ ಎಂದರು.
ಶಿರಸಿಯ ಸ್ವರ್ಣವಲ್ಲಿ ಮಹಾಸಂಸ್ಥಾನ ಮತ್ತು ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಹಾಗೂ ಜಿಲ್ಲೆಯ ವಿವಿಧ ಶೈಕ್ಷಣಿಕ ಹಾಗು ಸಂಘ ಸಂಸ್ಥೆಗಳು ಹಾಗೂ ಭಕ್ತರ ಸಹಯೋಗದೊಂದಿಗೆ ಇದೇ ನವೆಂಬರ್ 4 ರಿಂದ ಡಿಸೆಂಬರ್ 12 ರವರೆಗೆ ವಿಜಯಪುರ ಜಿಲ್ಲೆಯಾದ್ಯಂತ ಭಗವದ್ಗೀತೆಯ 9ನೇ ಅಧ್ಯಾಯ ಕಂಠಪಾಠ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಭಗವದ್ಗೀತೆ ಅಭಿಯಾನದ ಮೂಲಕ ವ್ಯಕ್ತಿ ನಿರ್ಮಾಣ ಕಾರ್ಯ ನಿರಂತರವಾಗಿ ನಡೆಯಬೇಕೆಂಬ ಉದ್ದೇಶದಿಂದ ಈ ಅಭಿಯಾನವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳವರು ವಿದ್ಯಾರ್ಥಿಗಳನ್ನು ಇದರಲ್ಲಿ ಭಾಗವಹಿಸುವಂತೆ ಹಾಗೂ ಆಯೋಜಿಸಿರುವ ಗೀತಾ ಕಂಠಪಾಠ ಹಾಗೂ ಭಾಷಣ ಸ್ಪರ್ಧೆಗೆ ಮಕ್ಕಳನ್ನು ತಯಾರು ಮಾಡಬೇಕು ಎಂದರು.
ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮಿಗಳು ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ನೀತಿಪಾಠ ಬೋಧಿಸಬೇಕಾದ ಅವಶ್ಯಕತೆ ಹೆಚ್ಚಾಗಿದೆ. ಅವರ ಮನಸ್ಸನ್ನು ಹೆಚ್ಚು ಚಿಂತನಶೀಲರನ್ನಾಗಿಸಬೇಕಿದೆ. ಆಶ್ರಮವು ಅಭಿಯಾನಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು.
ಶಿಕ್ಷಣ ತಜ್ಞ ಶಿವಾನಂದ ಕೆಲೂರ ಮಾತನಾಡಿ, ಭಗವದ್ಗೀತಾ ಕಂಠಪಾಠ ಅಭಿಯಾನವನ್ನು ಯಶಸ್ವಿಗೊಳಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ವೃದ್ಧಿಸೋಣ ಎಂದರು.
ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಚೇರ್ಮನ್ ಸುರೇಶ ಬಿರಾದಾರ ಮಾತನಾಡಿ, ಈ ಅಭಿಯಾನದ ಮೂಲಕ ಮಕ್ಕಳಲ್ಲಿ ಮೌಲ್ಯದ ಜೊತೆಗೆ ಸಂಸ್ಕಾರ ವೃದ್ಧಿಸಲು ಇದು ಸಹಕಾರಿಯಾಗಿದೆ. ಇದನ್ನು ಯಶಸ್ಸುಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ , ಭಗವದ್ಗೀತಾ ಅಭಿಯಾನವನ್ನು 6ನೇ ತರಗತಿಯಿಂದ ಶಾಲೆಯಲ್ಲಿ ಹಾಗೂ ಕಾಲೇಜು, ಓಣಿ ಓಣಿಗಳಲ್ಲಿ ಆಯೋಜಿಸಿ ನಿಗದಿಪಡಿಸಿರುವ ದಿನಾಂಕದಂದು ಪಠಣ ಮಾಡುವಂತೆ ಎಲ್ಲರನ್ನೂ ಪ್ರೇರೇಪಿಸಬೇಕಾಗಿದೆ ಎಂದರು.
ರುಕ್ಮಾಂಗದ ಶಾಲೆ ಮುಖ್ಯಾಧ್ಯಾಪಕ ಎಲ್.ಎಸ್. ಕುಲಕರ್ಣಿ ಮಾತನಾಡಿ, ಭಗವದ್ಗೀತೆ ಮಕ್ಕಳಿಗೆ ಅತೀ ಅವಶ್ಯವಾಗಿದೆ. ಇದರಿಂದ ಮಕ್ಕಳಲ್ಲಿ ಸಮರ್ಥನಾ ಶಕ್ತಿ, ಧ್ಯಾನ ಮತ್ತು ಜ್ಞಾಪಕ ಶಕ್ತಿ ವೃದ್ಧಿಯಾಗಲಿದೆ. ವಾರಕ್ಕೆ ಕನಿಷ್ಠ ಎರಡು ಬಾರಿ ಶಾಲೆಯಲ್ಲಿ ಪಠಣ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಬೇಕು ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ ಮಾತನಾಡಿ, ಭಗವದ್ಗೀತೆ ಆಭಿಯಾನ ಅತ್ಯಂತ ಅವಶ್ಯವಿದ್ದು, ಸಿದ್ಧೇಶ್ವರ ಶ್ರೀಗಳು ಸಹ ಇದನ್ನೇ ಹೇಳಿದ್ದರು. ಉತ್ತಮ ಜೀವನ ನಿರ್ವಹಣೆಗೆ ಸುಸಂಸ್ಕೃತ ಸಂಸ್ಕಾರ ಅತ್ಯಗತ್ಯ ಎಂದರು.
ಜಿಲ್ಲಾ ಸಮಿತಿ ಗೌರವ ಆಧ್ಯಕ್ಷ ಅರುಣ ಸೋಲಾಪುರಕರ, ಕಾರ್ಯಾಧ್ಯಕ್ಷ ಅರುಣ ಶಹಾಪೂರ, ವಿಡಿಎ ಮಾಜಿ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ ಗುರುರಾಜ ಕುಲಕರ್ಣಿ, ಮಹೇಶ ದೇಶಪಾಂಡೆ, ಪವನ ಕುಲಕರ್ಣಿ, ಪವನ ಜೋಷಿ, ಸತೀಶ್ಚಂದ್ರ ಕುಲಕರ್ಣಿ , ಸಿದ್ದಣ್ಣ ಶಿರೂರ, ಅವಿನಾಶ್ ಬಡಿಗೇರ ಉಪಸ್ಥಿತರಿದ್ದರು.
ಅಭಿಯಾನದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಗನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಶ್ರೀರಾಮ ಭಟ್ ಕಾರ್ಯಕ್ರಮ ನಿರೂಪಿಸಿದರು.