ಸರಕಾರಿ ನೌಕರನೆಂದು ಸುಳ್ಳು ಹೇಳಿ ಮದುವೆಯಾಗಿ ವರದಕ್ಷಿಣೆ ಕಿರುಕುಳ
ಕಲಬುರಗಿ,ಜೂ.2-ಸರಕಾರಿ ನೌಕರನೆಂದು ಸುಳ್ಳು ಹೇಳಿ ಮದುವೆಯಾಗಿ ವರದಕ್ಷಿಣೆ ಕಿರುಕುಳ ನೀಡಿರುವ ಬಗ್ಗೆ ಮಹಿಳೆಯೊಬ್ಬರು ಪತಿ ಮತ್ತು ಆತನ ಕುಟುಂಬದವರ ವಿರುದ್ಧ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸಿಐಬಿ ಕಾಲೋನಿಯ ಪ್ರಿಯಾಂಕಾ ರವಿಕುಮಾರ (22) ಎಂಬುವವರೆ ದೂರು ಸಲ್ಲಿಸಿದ್ದಾರೆ.
ಬೀದರ್‍ನ ಪ್ರತಾಪ್ ನಗರದ ಪ್ರಿಯಾಂಕಾ ಜೊತೆ ರವಿಕುಮಾರ 25-11-2012 ರಂದು ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯಲ್ಲಿ ಉಡುಗೊರೆಯಾಗಿ 5 ತೊಲೆ ಬಂಗಾರ, 2 ಲಕ್ಷ ನಗದು, ಮನೆ ಬಳಕೆಯ ಸಾಮಾನು ಸೇರಿ 10 ಲಕ್ಷ ಖರ್ಚು ಮಾಡಲಾಗಿದೆ. ಅಲ್ಲದೆ ರವಿಕುಮಾರ ಸರಕಾರಿ ನೌಕರನೆಂದು ಸುಳ್ಳು ಹೇಳಿ ಮದುವೆಯಾಗಿರುವುದಾಗಿ ಪ್ರಿಯಾಂಕಾ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆ ನಂತರ ಪತಿ ರವಿಕುಮಾರ, ಅತ್ತೆ, ಮಾವ ಅಡುಗೆ ಮಾಡಲು ಬರುವುದಿಲ್ಲ. ಸಂಬಂಧಿಕರು ಬಂದರೆ ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ಅವಾಚ್ಯವಾಗಿ ಬೈಯ್ದು ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾರೆ.
ತವರು ಮನೆಯಿಂದ 8 ಲಕ್ಷ ರೂ.ತರುವಂತೆ ಕಿರುಕುಳ ನೀಡಿದ್ದು, ಅದನ್ನು ಸಹಿಸದೆ ಮುಧೋಳ ಠಾಣೆಯಲ್ಲಿ ದೂರು ಸಲ್ಲಿಸಬೇಕು ಅನ್ನುವಷ್ಟರಲ್ಲಿ ಬೀದರ್‍ನ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ಅಲ್ಲದೆ ಒತ್ತಾಯಪೂರ್ವಕವಾಗಿ ಕೆಲವು ಕಾಗದ ಪತ್ರಗಳಿಗೆ ಸಹಿ ಮಾಡಿಸಿಕೊಂಡು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ತನಿಖೆ ನಡೆದಿದೆ.